ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಬಂಟ್ವಾಳದಲ್ಲಿ ನಡೆಸುವ ಕುರಿತು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರೊಂದಿಗೆ ಸಮಾಲೋಚನಾ ಸಭೆ ಬುಧವಾರ ಸಂಜೆ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಈ ಕುರಿತು ಪ್ರಸ್ತಾಪಿಸಿ, ಬಂಟ್ವಾಳ ತಾಲೂಕಿನಲ್ಲಿ ಈ ಅವಧಿಯಲ್ಲಿ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಅಭಿಮಾನಿಗಳು ತೊಡಗಿಸಿಕೊಂಡ ರೀತಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಪ್ರೇರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಬಂಟ್ವಾಳದ ಆತಿಥ್ಯದಲ್ಲಿ ಸಮ್ಮೇಳನ ನಡೆಸುವುದಾದರೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ದ.ಕ.ಜಿಲ್ಲೆ ಮಾಜಿ ಅಧ್ಯಕ್ಷ ಹಾಗೂ ಸಾಹಿತ್ಯ ಸಂಘಟಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಇಂದು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ವೇಳೆ ಸಿದ್ಧಸೂತ್ರಗಳನ್ನು ಬದಿಗಿರಿಸಿ, ಆಸಕ್ತರಲ್ಲಿ ಸಾಹಿತ್ಯಪ್ರಜ್ಞೆಯನ್ನು ಬೆಳೆಸುವ ಹಾಗೂ ಕನ್ನಡ ಮತ್ತು ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಂಥನಗಳು ಸಮ್ಮೇಳನದಲ್ಲಾಗಬೇಕಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಬಂಟ್ವಾಳದಲ್ಲಿ ಆಯೋಜಿಸುವುದಾದರೆ ಅದನ್ನೊಂದು ಮಾದರಿ ಸಮ್ಮೇಳನವನ್ನಾಗಿಸುವ ಅವಕಾಶವಿದೆ. ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಹಲವು ಜಿಲ್ಲಾ ಸಮ್ಮೇಳನಗಳನ್ನು ಸಂಘಟಿಸಲಾಗಿದ್ದು, ತಾಲೂಕಿನ ಸಾಹಿತ್ಯ ಪರಿಷತ್ತು, ಸಾಹಿತ್ಯ ಪ್ರೇಮಿಗಳ ಸಹಕಾರ ದೊರಕಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣವಾಗಿ ನೇತೃತ್ವವನ್ನು ವಹಿಸಿಕೊಂಡು ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ, ಸದಸ್ಯ ಪೂವಪ್ಪ ನೇರಳಕಟ್ಟೆ, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ಬಂಟ್ವಾಳ ತಾಲೂಕಿನ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವಿ.ಸು.ಭಟ್, ರಮಾನಂದ ನೂಜಿಪ್ಪಾಡಿ, ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್, ಪಾಣೆಮಂಗಳೂರು ಹೋಬಳಿ ಅಧ್ಯಕ್ಷ ಪಿ.ಮಹಮ್ಮದ್, ವಿಟ್ಲ ಹೋಬಳಿ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು, ಬಂಟ್ವಾಳ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಪದಾಧಿಕಾರಿಗಳಾದ ರವೀಂದ್ರ ಕುಕ್ಕಾಜೆ, ಸುಭಾಶ್ಚಂದ್ರ ಜೈನ್, ಹರೀಶ ಮಾಂಬಾಡಿ, ಲತೀಫ್ ನೇರಳಕಟ್ಟೆ, ಸಲೀಂ ಬೋಳಂಗಡಿ, ಅಬುಬಕರ್ ಅಮ್ಮುಂಜೆ, ರಜನಿ ಚಿಕ್ಕಯ್ಯಮಠ, ಪ್ರಮುಖರಾದ ಸನ್ಮತಿ ಜೈನ್, ಕೃಷ್ಣ ಭಟ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.


Be the first to comment on "ಬಂಟ್ವಾಳದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ: ಸಮಾಲೋಚನಾ ಸಭೆ"