ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಕಾರಿ ಜಾಗಗಳೇನೋ ಉಂಟು. ಅದನ್ನು ಒದಗಿಸಲು ಪಂಚಾಯಿತಿಗೂ ಮನಸ್ಸುಂಟು. ಆದರೆ ಅದರ ಪ್ರಕ್ರಿಯೆಗೆ ಹೊರಟಾಗ ತಕರಾರುಗಳು ಆರಂಭಗೊಳ್ಳುತ್ತವೆ. ಎಲ್ಲವೂ ಸರಿ ಆಯಿತು ಎಂದರೆ, ಪ್ರಕ್ರಿಯೆಯೇ ವಿಳಂಬವಾಗುತ್ತದೆ.

ಬಂಟ್ವಾಳ ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನಕ್ಕೆಂದು ಗುರುತಿಸಿದ ಬಳಿಕ ಅದು ನಮ್ಮದೆಂದು ತಕರಾರು ಸಲ್ಲಿಸಿದ ಪ್ರಕರಣಗಳು ಹಲವೆಡೆಯಾದರೆ, ನಿವೇಶನಕ್ಕೆಂದು ಹೇರಳವಾದ ಜಾಗ ಇದ್ದರೂ ಅದನ್ನು ತಲುಪುವ ದಾರಿಯೇ ಬಂದ್ ಆಗಿರುವ ಪರಿಸ್ಥಿತಿಯೂ ಇದೆ.
6572 ನಿವೇಶನರಹಿತರು:
ನಗರ ಸ್ಥಳೀಯಾಡಳಿತ ಸಂಸ್ಥೆಯನ್ನು ಹೊರತುಪಡಿಸಿದರೆ, ಬಂಟ್ವಾಳ ತಾಲೂಕಿನಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ನಿವೇಶನರಹಿತರು ಇದ್ದಾರೆ. ಪರಿಶಿಷ್ಟಜಾತಿ 310, ಪರಿಶಿಷ್ಟ ಪಂಗಡ 155, ಅಲ್ಪಸಂಖ್ಯಾತರು 3700, ಸಾಮಾನ್ಯ2407 ಒಟ್ಟು 6572 ನಿವೇಶನರಹಿತರು ಸೂಕ್ತ ಜಾಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ನಿವೇಶನಕ್ಕಾಗಿ ಮಂಜೂರಾದ 67.99 ಎಕ್ರೆ ಸ್ಥಳದಲ್ಲಿ 1455 ನಿವೇಶನಗಳನ್ನು ರಚಿಸಲಾಗಿದ್ದು, 801 ನಿವೇಶನಗಳನ್ನು ವಿತರಿಸಲಾಗಿದೆ. 142.53 ಎಕ್ರೆ ಸ್ಥಳವನ್ನು ನಿವೇಶನಕ್ಕಾಗಿ ಕಾದಿರಿಸಲು ಕಂದಾಯ ಇಲಾಖೆಗೆ ಆಯಾ ಗ್ರಾಮ ಪಂಚಾಯಿತಿಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅಳಿಕೆ, ಅಮ್ಟಾಡಿ ಅನಂತಾಡಿಯಲ್ಲಿ ಗುರುತಿಸುವಿಕೆ ಪ್ರಗತಿಯಲ್ಲಿದೆ. ಕಡೇಶ್ವಾಲ್ಯ ಗ್ರಾಮದಲ್ಲಿ 2.69 ಎಕರೆ ನಿವೇಶನ ರಚನೆಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವೆಡೆ ಕಂದಾಯ ಇಲಾಖೆಯಿಂದ ನಿವೇಶನ ವಿತರಣೆಗೆ ಮಂಜೂರಾದ ಜಮೀನು ಗ್ರಾಮ ಪಂಚಾಯಿತಿಗೆ ಗಡಿಗುರುತು ಹಾಗೂ ಹಸ್ತಾಂತರಗೊಳ್ಳುವ ಪ್ರಕ್ರಿಯೆ ನಡೆದಿಲ್ಲವಾದರೆ, ಕೆಲವೆಡೆ ವ್ಯಾಜ್ಯ ನ್ಯಾಯಾಲಯದಲ್ಲಿದೆ.ಕೆಲವೆಡೆ ನಿವೇಶನಕ್ಕೆಂದು ಗುರುತಿಸಲಾದ ಜಾಗ ಗುಂಡಿಪ್ರದೇಶದಲ್ಲಿದ್ದು, ಅದರ ಮಧ್ಯೆ ದೊಡ್ಡ ತೋಡು ಇದ್ದರೆ, ಕೆಲವೆಡೆ ಬಂಡೆಕಲ್ಲು ಜಾಸ್ತಿ ಇದ್ದು, ಸಮತಟ್ಟು ಮಾಡಿ ನಿವೇಶನ ಹಂಚಿಕೆಗೆ ಯೋಗ್ಯವೇ ಆಗಿರುವುದಿಲ್ಲ. .


Be the first to comment on "ಬಂಟ್ವಾಳ ತಾಲೂಕಿನಲ್ಲಿ 6 ಸಾವಿರಕ್ಕೂ ಅಧಿಕ ನಿವೇಶನರಹಿತರು"