
NH
ಹೆದ್ದಾರಿ ಚತುಷ್ಪಥಗೊಂಡ ಬಳಿಕ ರಸ್ತೆ ಸಂಚಾರ ಸುಗಮವಾಗಿ ಸಾಗಬೇಕಿತ್ತು. ಆದರೆ ಬಿ.ಸಿ.ರೋಡ್ ನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು, ಎರಡು ಸ್ಥಳೀಯ ರಸ್ತೆಗಳು ಕೂಡುವ ಸ್ಥಳದಲ್ಲಿ ವಾಹನಗಳನ್ನು ಚಲಾಯಿಸುವ ವೇಳೆ ಎಷ್ಟು ಜಾಗರೂಕವಾಗಿದ್ದರು ಸಾಲದು.
ಕೆಲ ದಿನಗಳಿಂದ ಬಿ.ಸಿ.ರೋಡ್ ಪೇಟೆಯಲ್ಲೂ ವಾಹನದಟ್ಟಣೆ ಜಾಸ್ತಿಯಾಗುತ್ತಿದೆ. ಅಜ್ಜಿಬೆಟ್ಟು ತಿರುವಿನಿಂದ ಸರ್ಕಲ್ ವರೆಗಿನ ಜಾಗದಲ್ಲಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದು ಒಂದು ಕಾರಣವಾದರೆ, ಸರ್ಕಲ್ ಸಮೀಪ ಬರುವಾಗ ಎಡಕ್ಕೆ ಚಲಿಸಿದರೂ ಕಷ್ಟ, ಬಲಕ್ಕೆ ತಿರುಗಿಸಲಾಗದ ಸಂಕಷ್ಟದಿಂದ ವಾಹನ ಚಾಲಕರು ದಿಢೀರನೆ ಬ್ರೇಕ್ ಹಾಕುವುದುಂಟು.
ದಿಕ್ಕು ತಪ್ಪದಂತೆ ಎಚ್ಚರ ಬೇಕು:
ಎನ್.ಎಚ್.೭೫, ಎನ್.ಎಚ್.೭೩ ಹಾಗೂ ಎರಡು ಸ್ಥಳೀಯ ರಸ್ತೆಗಳು ಕೂಡುವ ಸ್ಥಳವಿದು. ಗೂಡಿನಬಳಿ, ಬಂಟ್ವಾಳ ಪೇಟೆ, ಬಂಟ್ವಾಳ ಬೈಪಾಸ್, ಬಿ.ಸಿ.ರೋಡ್ ಸೇತುವೆ ಕಡೆಯಿಂದ ರಸ್ತೆಗಳು ಇಲ್ಲಿ ಸಂಗಮಿಸುತ್ತವೆ. ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಅಭಿವೃದ್ಧಿಯ ಭಾಗವಾಗಿ ಇಲ್ಲಿ ವಿಶಾಲವಾದ ವೃತ್ತವನ್ನು ನಿರ್ಮಿಸಲಾಗಿದೆ. ಬೆಂಗಳೂರು ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳಿಗೆ ಬೆಳ್ತಂಗಡಿ, ಬಂಟ್ವಾಳ ಪೇಟೆಯಿಂದ ಬರುವ ಹಾಗೂ ಗೂಡಿನಬಳಿ ರಸ್ತೆಯ ಮೂಲಕ ಹೋಗುವ ವಾಹನಗಳು ಮುಖಾಮುಖಿಯಾಗುತ್ತವೆ. ಬಿ.ಸಿ.ರೋಡು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಬೆಳ್ತಂಗಡಿ, ಬಂಟ್ವಾಳ ಪೇಟೆಯಿಂದ ಬರುವ ವಾಹನಗಳು ಎದುರುಬದುರಾಗುತ್ತವೆ. ಇಲ್ಲಿ ವಾಹನ ಸವಾರರು ದಿಕ್ಕುತಪ್ಪದಂತೆ ಎಚ್ಚರ ವಹಿಸುವುದು ಅಗತ್ಯ. ಬಂಟ್ವಾಳದಿಂದ ಬಿ.ಸಿ.ರೋಡ್ ಗೆ ಬರುವ ಇಕ್ಕಟ್ಟಿನ ಜಾಗದಲ್ಲಿ ವಾಹನತಪಾಸಣೆಯನ್ನೂ ಟ್ರಾಫಿಕ್ ಪೊಲೀಸರು ಮಾಡುತ್ತಾರೆ.
ಟ್ರಾಫಿಕ್ ಜಾಮ್ ಹಾಗೂ ಸರಣಿ ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಬಂಟ್ವಾಳ ಪುರಸಭೆಯ ಅಧ್ಯಕ್ಷರಾಗಿದ್ದ ವಾಸು ಪೂಜಾರಿ ಮಂಗಳೂರು ಸಂಸದ ಬೃಜೆಶ್ ಚೌಟ ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯವೃತ್ತದ ಎಡಭಾಗದಲ್ಲಿ ರೈಲ್ವೇ ಇಲಾಖೆಗೆ ಸೇರಿದ ಖಾಲಿ ಜಾಗವಿದ್ದು ರಸ್ತೆಯನ್ನು ಅಗಲಗೊಳಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಲು ಸಾಧ್ಯವಿದೆ ಎನ್ನುವ ಸಲಹೆಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಚ್ಚರಿಕೆಯ ಸೂಚನೆ:
ಅಪಘಾತದ ನಡೆದು ಮೂರು ಮಂದಿ ಮೃತಪಟ್ಟ ಬಳಿಕ ಮುಖ್ಯವೃತ್ತದ ಬಳಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಫಲಕಗಳನ್ನು ಅಳವಡಿಸಿದೆ. ಲ್ಲಾ ಪೊಲೀಸ್ ವರಿಷ್ಠಾಕಾರಿ ಇಲ್ಲಿಗೆ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ಅನ ಅಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯವೃತ್ತದ ಹೈಮಾಸ್ಕ್ ದೀಪಗಳು ಉರಿಯಲಾರಂಭಿಸಿದೆ. ಎರಡು ಕಡೆಗಳಲ್ಲಿ ಹಳದಿ ಸಿಗ್ನಲ್, ವೃತ್ತದ ಸುತ್ತ ರಿಫ್ಲೆಕ್ಟರ್ ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ರಸ್ತೆಗೆ ಕಂಪನ ಪಟ್ಟಿಗಳನ್ನು ಅಳವಡಿಸಲಾಗಿದೆ.


Be the first to comment on "ಬಂಟ್ವಾಳದಿಂದ ಬಿ.ಸಿ.ರೋಡ್ ಕಡೆ ಸುರಕ್ಷಿತವಾಗಿ ತಿರುಗುವುದು ದೊಡ್ಡ ಚಾಲೆಂಜ್"