

ಅಗಲವಾದ ರಸ್ತೆ, ಹಾವಿನಂತೆ ಸುತ್ತಿಕೊಂಡಿರುವ ಹೇರ್ ಪಿನ್ ತಿರುವುಗಳು. ಭರ್ರನೆ ಸದ್ದಿನೊಂದಿಗೆ ಸಾಗುವ ಬೈಕರ್ ಗಳನ್ನು ಗಮನಿಸಿಕೊಂಡು, ಆಂದ್ರಪ್ರದೇಶದಲ್ಲಿರುವ PENUKONDA ಪೆನುಕೊಂಡ (ಪೆನುಗೊಂಡ) ಕೋಟೆ ತಲುಪುವುದು ಬೆಂಗಳೂರಿನಲ್ಲಿರುವವರಿಗೆ ದೂರವೇನಲ್ಲ. ಬೆಂಗಳೂರಿನಿಂದ ಕೇವಲ ಮೂರು ಗಂಟೆ ದಾರಿ ಕ್ರಮಿಸಿದರೆ, ವಿಜಯನಗರ ಸಂಸ್ಥಾನದ ರಾಜರ ಎರಡನೇ ರಾಜಧಾನಿ ಎಂದೇ ಹೇಳಲಾಗುತ್ತಿರುವ ಪೆನುಕೊಂಡ (ಪೆನುಗೊಂಡ) ಸಿಗುತ್ತದೆ. ಇಲ್ಲಿ ಬೆಟ್ಟದ ಮೇಲಿನ ಕೋಟೆ, ಅಲ್ಲಿರುವ ಪಳೆಯುಳಿಕೆಗಳು ಹಾಗು ಕೆಳಗಿರುವ ಗಗಮಹಲ್ ಹೆಸರಿನ ಅರಮನೆ ಗತವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.
FOR VIDEO CLICK THIS LINK:

Entrance
ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜವಂಶ ಎಂದು ಹೇಳಲಾದ ಅರವೀಡು ರಾಜವಂಶದ ಕೋಟೆಯ ಪಳೆಯುಳಿಕೆಗಳು, ಇತಿಹಾಸವನ್ನು ಹೇಳುವ ಶಾಸನಗಳು ಹುಲ್ಲುಪೊದೆಯ ಮಧ್ಯೆ ಅಡಗಿ ಕುಳಿತಿವೆ. ಪ್ರವಾಸಿಗರು ಬೆಟ್ಟವೇರಿದರೂ ಅಲ್ಲೇನಿದೆ ಎಂಬುದನ್ನು ಹೇಳಲು ಯಾರೂ ಇಲ್ಲ. ಕುತೂಹಲ ತಣಿಸಲು ಸ್ವಲ್ಪ ಹೆಜ್ಜೆ ಹಾಕಿದರೂ ಮುಳ್ಳುಪೊದೆಗಳು ದಾರಿ ತೋರಿಸುವುದಿಲ್ಲ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಮುಖ ಆಡಳಿತ ಕೇಂದ್ರವಿದು ಎಂದು ಹೇಳಿದರಷ್ಟೇ ಗೊತ್ತಾದೀತು.



ದಾರಿ ಮೊದಲೇ ಗೊತ್ತಿದ್ದರೆ ಒಕೆ. ಇಲ್ಲವಾದರೆ, ಗೂಗಲ್ ನಲ್ಲಿ ತೋರಿಸುವ ದಾರಿಯಲ್ಲಿ ಸಾಗುವಾಗ ನಾವೂ ಎಚ್ಚರದಲ್ಲಿರುವುದು ಒಳಿತು. ಕೋಟೆಗೆ ಹೋಗುವ ದಾರಿ ಎಂಬ ಬೋರ್ಡುಗಳು ಕಾಡಿಸುವುದಿಲ್ಲ. ಅಗ್ನಿಶಾಮಕದಳ ಕಚೇರಿ (ಫೈರ್ ಇಂಜಿನ್ ಆಫೀಸ್) ಎಲ್ಲಿ ಎಂದು ದ್ವಾರದೊಳಗೆ ಪ್ರವೇಶಿಸುವ ಮೂಲಕ ಗೊತ್ತು ಮಾಡಿಕೊಂಡು ಸಾಗಿದರೆ ಮತ್ತೆ ಮಾರ್ಗ ಸರಾಗ.

ಹೋಗುವಾಗ ನೀರಿನ ಬಾಟಲ್ ಹಿಡಿದುಕೊಂಡು ಸಾಗಿ. ಅಲ್ಲೇನೂ ಸಿಗೋದಿಲ್ಲ. ಇದು ಇನ್ನು ಅಭಿವೃದ್ಧಿಯಾಗುತ್ತದೆ ಎಂದು ಸ್ಥಳೀಯರೊಬ್ಬರು ಹೇಳಿದರಾದರೂ ಯಾವಾಗ ಎಂಬ ಸ್ಪಷ್ಟನೆ ಅವರಲ್ಲಿಲ್ಲ. ಹಾಗೆ ಬೆಟ್ಟದ ಕೆಳಗೆ ಮತ್ತೆ ಅದೇ ದಾರಿಯಲ್ಲಿ ಸಾಗಿ ನೇರವಾಗಿ ಗಗನಮಹಲ್ ಅರಮನೆ (GAGANMHAL PALACE) ನೋಡಿಯೇ ಬರಬೇಕು. ತುಕ್ಕುಹಿಡಿದ ಬೋರ್ಡ್ ಅಲ್ಲಿನ ನಿರ್ವಹಣೆ ಹೇಗಿದೆ ಎಂಬುದನ್ನು ಸಾಬಿತುಪಡಿಸುತ್ತದೆ!.




Be the first to comment on "ಪೆನುಕೊಂಡದ ತಿರುವುಗಳನ್ನು ಹತ್ತಿ ಬೆಟ್ಟವೇರಿದರೆ… ಮೌನವಾಗಿರುವ ಕಲ್ಲುಗಳು ಕಥೆ ಹೇಳುತ್ತವೆ!!!"