
ಬಿ.ಸಿ.ರೋಡ್ ಸರ್ಕಲ್ ವಿಸ್ತಾರವಾದದ್ದೇ ಅಪಘಾತಗಳಿಗೆ ಕಾರಣವಾಗುತ್ತಿದೆಯೇ?
ಶನಿವಾರ ಬೆಳಗ್ಗೆ ಸಂಭವಿಸಿದ ಅಪಘಾತವನ್ನು ಗಮನಿಸಿದಾಗ ಹಾಗೂ ಇತ್ತೀಚೆಗೆ ನಡೆದ ಅಪಘಾತಗಳನ್ನು ನೋಡಿದಾಗ ಈ ಅನುಮಾನ ಸಾರ್ವಜನಿಕರಿಗೆ ಮೂಡುವುದು ಸಹಜ. ಈ ಕುರಿತು ತಜ್ಞರು ವಿಸ್ತರಿತ ಅಧ್ಯಯನ ನಡೆಸುವುದು ಇಂದಿನ ಜರೂರತ್ತು
ಸರ್ಕಲ್ ಅಗಲಗೊಳ್ಳುವ ಸಂದರ್ಭ ಅದರ ಸರ್ವದಿಕ್ಕುಗಳಲ್ಲೂ ಪೂರಕವಾಗಿ ರಸ್ತೆ ಅಗಲಗೊಂಡಿಲ್ಲ. ಹೀಗಾಗಿ ಗೊಂದಲಗಳಾಗುತ್ತದೆ ಎಂದು ಸ್ಥಳೀಯರು ಆರಂಭದಲ್ಲೇ ದೂರಿದ್ದರು. ಮಾಧ್ಯಮಗಳಲ್ಲಿ ಈ ಕುರಿತ ವರದಿಗಳು ಪ್ರಕಟವಾಗಿದ್ದವು. ಸರ್ಕಲ್ ಇರುವ ಜಾಗದಲ್ಲಿ ವಾಹನಗಳು ವೇಗವಾಗಿ ಹೋಗಬಾರದು, ಜಾಗ್ರತೆಯಾಗಿ ಹೋದರೆ ಏನೂ ಆಗೋದಿಲ್ಲ. ಅಲ್ಲದೆ, ಇದು ವೇಗನಿಯಂತ್ರಿಸಿ ಅಪಘಾತ ತಡೆಯಲು ಮಾಡುವ ಕ್ರಮ ಎಂದು ಅಧಿಕಾರಿಗಳು ತಿಳಿಸಿದ್ದರು. ಸರ್ಕಲ್ ಅಗಲಗೊಂಡಿರುವ ವಿಚಾರ ಸ್ಥಳೀಯರಿಗೇನೋ ಗೊತ್ತಾಗುತ್ತದೆ. ಸೇತುವೆ ಕಡೆಯಿಂದ ಆಗಮಿಸುವವರು ಸರ್ಕಲ್ ಹತ್ತಿರ ಬರುವಾಗ ಗಕ್ಕನೆ ಬ್ರೇಕ್ ಹಾಕುವ ಪರಿಸ್ಥಿತಿಯೂ ಇದೆ. ಅಲ್ಲದೆ, ಸೇತುವೆ ಕಡೆಯಿಂದ ನೇರವಾಗಿ ಬರುವವರು ಸರ್ಕಲ್ ಸಮೀಪ ಬಂದಾಗ ಸ್ವಲ್ಪ ಎಡಕ್ಕೆ ಚಲಿಸಬೇಕು. ನೇರವಾಗಿ ಸಾಗಿದರೆ ಗುದ್ದುವುದು ಗ್ಯಾರಂಟಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆರವಾಗುತ್ತದೆ.
ಅಲ್ಲದೇ ಸರ್ಕಲ್ ಅಗಲವಾದ ಬಳಿಕ ಸುತ್ತಮುತ್ತ ರಸ್ತೆ ಕಿರಿದಾಗಿದೆ. ಗೂಡಿನಬಳಿಯಿಂದ ಬಿ.ಸಿ.ರೋಡಿಗೆ ಬರುವ ಭಾಗ ಅಪಾಯಕಾರಿಯಾಗಿದ್ದರೆ, ಬಂಟ್ವಾಳದಿಂದ ಬಿ.ಸಿ.ರೋಡಿಗೆ ಬರುವ ವೇಳೆ ಸರ್ಕಲ್ ಸುತ್ತು ಹೊಡೆಯುವುದೆಂದರೆ ಸರ್ಕಸ್ ಮಾಡಿದಂತಾಗುತ್ತದೆ.
ಸಾಲದ್ದಕ್ಕೆ ಬ್ಯಾನರ್, ಬಂಟಿಂಗ್ ಗಳು ವಾಹನಗಳ ದಿಕ್ಕುಕೆಡಿಸುತ್ತದೆ.
ಬಿ.ಸಿ.ರೋಡಿನಿಂದ ಪುತ್ತೂರು, ಬಂಟ್ವಾಳದಿಂದ ಬಿ.ಸಿ.ರೋಡಿಗೆ ಬರುವ ವಾಹನಗಳು ಅದೃಷ್ಟವಶಾತ್ ಡಿಕ್ಕಿಯಾಗದೆ ಉಳಿಯುತ್ತವೆಯೇ ಹೊರತು, ಪ್ರತಿ ಕ್ಷಣವೂ ಅಪಾಯ ತಪ್ಪಿದ್ದಲ್ಲ. ಆದರೆ ಇಡೀ ಸರ್ಕಲ್ ನಲ್ಲಿ ಮುಖ್ಯ ಸಮಸ್ಯೆ ಸೇತುವೆ ಭಾಗದಿಂದ ಆಗಮಿಸುವ ವಾಹನಗಳಿಗೆ ಒದಗುತ್ತದೆ.
ನೇತ್ರಾವತಿ ಸೇತುವೆ ಕಡೆಯಿಂದ ವೇಗವಾಗಿಯೇ ವಾಹನಗಳು ಬಿ.ಸಿ.ರೋಡ್ ಸರ್ಕಲ್ ಕಡೆ ಬರುತ್ತವೆ. ಆದರೆ ಹೋಗಲು ಅನಿರೀಕ್ಷಿತವಾಗಿ ಎದುರಾಗುವ ಸರ್ಕಲ್ ವಾಹನ ಸವಾರರನ್ನು ಗಲಿಬಿಲಿಗೊಳಿಸುತ್ತವೆ. ಅತ್ತ ಬಂಟ್ವಾಳದಿಂದ, ಇತ್ತ ಪಾಣೆಮಂಗಳೂರು ಕಡೆಯಿಂದ ವಾಹನಗಳು ಬರುವ ವೇಳೆ ಅವುಗಳನ್ನು ಗಮನಿಸುತ್ತಾ ವಾಹನಗಳು ಚಲಿಸಬೇಕಾಗುತ್ತದೆ. ಸರ್ಕಲ್ ದಾಟಿ ಬಿ.ಸಿ.ರೋಡ್ ಕಡೆ ಹೋಗುವಾಗ ದಿಢೀರ್ ರಸ್ತೆ ಕಿರಿದಾಗುತ್ತದೆ. ಅಲ್ಲಲ್ಲಿ ವಿಭಜಕಗಳನ್ನು ಅಪಘಾತ ತಡೆಯಲೆಂದು ಮಾಡಿದ್ದಾಗಿ ಹೆದ್ದಾರಿ ಇಲಾಖೆ ಹೇಳಿಕೊಳ್ಳುತ್ತದೆಯಾದರೂ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಶನಿವಾರ ನಡೆದ ಅಪಘಾತವೇ ಇದಕ್ಕೆ ಸಾಕ್ಷಿ.ಶ
ಶನಿವಾರ ನಸುಕಿನ ಜಾವ ಸುಮಾರು ನಾಲ್ಕೂವರೆ ಗಂಟೆಗೆ ಮಂಜು ಮುಸುಕು ಹಾಗೂ ಕತ್ತಲಾವರಿಸಿದ ಹಿನ್ನೆಲೆ ವೇಗದಲ್ಲಿ ಆಗಮಿಸುತ್ತಿದ್ದ ಇನ್ನೋವಾ ವಾಹನಕ್ಕೆ ಸರ್ಕಲ್ ದಿಢೀರ್ ಅಡ್ಡಬಂದಂತಾಗಿದೆ. ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂರು ಜೀವಗಳು ಬಲಿಯಾಗಿವೆ.


Be the first to comment on "ಬಿ.ಸಿ.ರೋಡ್ ಸರ್ಕಲ್ ಸುತ್ತಮುತ್ತ ಅಪಘಾತಕ್ಕೇನು ಕಾರಣ?"