| ರಾಜ್ಯದ 344 ಶಾಲೆಗಳ ಮಕ್ಕಳಿಗೆ ಉಚಿತವಾಗಿ ಜಾಗೃತಿ ಸಂದೇಶ

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ’ ಎಂಬ ಸಂದೇಶದೊಂದಿಗೆ ಅಳಿವಿನಂಚಿನ ಪಕ್ಷಿಗಳ ಹಾಗೂ ಸಸ್ಯಗಳು ಸೇರಿದಂತೆ ಪರಿಸರ ಸಂರಕ್ಷಣೆಗೆ ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಎಲಿಯನಡುಗೋಡಿನ ಈ ದಂಪತಿ ಕರ್ನಾಟಕ ಯಾತ್ರೆ ಕೈಗೊಂಡಿದ್ದಾರೆ.

ಕಳೆದ ವರ್ಷ ಯಾತ್ರೆಗೆ ಹೊರಟು, ಸುಮಾರು ಆರು ಜಿಲ್ಲೆಗಳ ಪರ್ಯಟನ ನಡೆಸಿ, ಶಾಲೆಗಳಲ್ಲಿ ಜಾಗೃತಿ ಮೂಡಿಸಿದ್ದ ನಿತ್ಯಾನಂದ ಶೆಟ್ಟಿ, ರಮ್ಯಾ ನಿತ್ಯಾನಂದ ಶೆಟ್ಟಿ ದಂಪತಿ ಕಳೆದ ಅಕ್ಟೋಬರ್ 27ರಿಂದ 31ರವರೆಗೆ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಇದೀಗ ಮತ್ತೆ ಹಾಸನ ಜಿಲ್ಲೆಯತ್ತ ಪಯಣ ಬೆಳೆಸಲಿದ್ದಾರೆ. ಕೆಲ ವರ್ಷಗಳಿಂದ ಗುಬ್ಬಚ್ಚಿಗೂಡು ಎಂಬ ಹೆಸರಲ್ಲಿ ನಡೆಯು್ತ್ತಿರುವ ಪರಿಸರ ಆಂದೋಲನದಲ್ಲಿ ಒಟ್ಟು 344 ಶಾಲೆಗಳ ಮಕ್ಕಳು ಭಾಗಿಯಾಗಿದ್ದು, ಅಷ್ಟೂ ಶಾಲೆಗಳಲ್ಲಿ ಈ ದಂಪತಿ ಉಚಿತವಾಗಿ ಮಾರ್ಗದರ್ಶನ ಮಾಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಶಾಲೆಗಳನ್ನು ಸಂಪರ್ಕಿಸಿ, ಮಕ್ಕಳಿಗೆ ಪರಿಸರ ಬೋಧನೆ ಮಾಡಿರುವ ಈ ದಂಪತಿ, ಕಳೆದ ವರ್ಷ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಮೈಸೂರು, ಬೆಂಗಳೂರು ಜಿಲ್ಲೆಗಳನ್ನು ಸಂಪರ್ಕಿಸಿ, ಅಲ್ಲಿ ಪಕ್ಷಿಗಳ ಕುರಿತು ವಿವರಿಸಿದ್ದರು. ಮೊನ್ನೆ ಅಕ್ಟೋಬರ್ 27ರಿಂದ 31ರವರೆಗೆ ಬೆಳಗಾವಿ, ಕೊಪ್ಪಳ, ರಾಯಚೂರು,ಶಿವಮೊಗ್ಗದ 12 ಶಾಲೆಗಳಿಗೆ ಭೇಟಿ ನೀಡಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ನಿತ್ಯಾನಂದ ಶೆಟ್ಟಿ ತಿಳಿಸಿದರು.
ಗುಬ್ಬಚ್ಚಿಗೂಡು ಯಾತ್ರೆಯ ಹಿಂದೆ:

ತನ್ನ ತಾಯಿಯ ಸ್ಪೂರ್ತಿಯಿಂದ ಬಾಲ್ಯದಿಂದಲೇ ಪಕ್ಷಿ ಸಂರಕ್ಷಣೆ ಕಡೆ ಒಲವು ತೋರಿರುವ ನಿತ್ಯಾನಂದ ಶೆಟ್ಟಿ 2 ಎಕರೆ ಜಾಗವನ್ನು ಪಕ್ಷಿಗಳ ಕಲರವಕ್ಕೆ ಅನುಕೂಲ ಮಾಡಿ ಆ ಜಾಗದಲ್ಲಿ ಪಕ್ಷಿಗಳಿಗೆ ವಿಭಿನ್ನ ಮನೆಗಳನ್ನು ನಿರ್ಮಾಣ ಮಾಡಿ, ಬೇಸಿಗೆಯಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಿ ಮಾದರಿಯಾಗಿದ್ದಾರೆ.
ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಬಿದಿರಿನ ಕೃತಕ ಗೂಡುಗಳನ್ನು ತಯಾರಿಸಿ ಆಸಕ್ತರಿಗೆ ಉಚಿತವಾಗಿ ನೀಡಿ ಪಕ್ಷಿಗಳಿಗೆ ನೀರಿಡಲು ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ನೀಡಿರುತ್ತಾರೆ.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ದಕ್ಷಿಣ ಕನ್ನಡದ ನಿವಾಸಿ ನಿತ್ಯಾನಂದ ಶೆಟ್ಟಿ ಮತ್ತು ಅವರ ಪತ್ನಿ ಎಂ.ಕಾಂ ಪದವೀಧರೆ ರಮ್ಯಾ ಅವರು ಪಕ್ಷಿಗಳಿಗಾಗಿ ಸುರಕ್ಷಿತ ಗೂಡುಗಳನ್ನು ಒದಗಿಸುತ್ತಿದ್ದಾರೆ. ಗುಬ್ಬಚ್ಚಿ ಗೂಡು ಅಭಿಯಾನದ ಸಂಸ್ಥಾಪಕರಾದ ನಿತ್ಯಾನಂದ ಶೆಟ್ಟಿ ತಮ್ಮ ಈ ನಿಸ್ವಾರ್ಥ ಕಾರ್ಯದ ಕುರಿತು ಮಾತನಾಡಿ, ‘ಪಕ್ಷಿಗಳನ್ನು ಸಂರಕ್ಷಿಸುವ ಧ್ಯೇಯವಾಕ್ಯದೊಂದಿಗೆ ನಾನು ಈ ವೇದಿಕೆಯನ್ನು ಆರಂಭಿಸಿದೆ. ನನ್ನ ಈ ಕಾರ್ಯಕ್ಕೆ ನನ್ನ ಮಡದಿ ಕೂಡ ಸಾಥ್ ನೀಡುತ್ತಿದ್ದಾರೆ. ಪಕ್ಷಿಗಳಿಗೆ ಮರ ಮತ್ತು ಬಿದಿರು ಮತ್ತು ಮಣ್ಣಿನ ಮಡಕೆಗಳಿಂದ ಮಾಡಿದ ಗೂಡುಗಳನ್ನು ನಿರ್ಮಿಸುತ್ತಿದ್ದೇವೆ. ಅಲ್ಲದೆ ತಮ್ಮ ಜೀವಿತಾವಧಿವರೆಗೂ ಈ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಜಮ್ಮು ಕಾಶ್ಮೀರ, ಪಂಜಾಬ್, ಉತ್ತರಾಖಂಡ, ದೆಹಲಿ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ಪಕ್ಷಿ ಉಳಿವಿನ ಬಗ್ಗೆ ಸಾರ್ವಜನಿಕರಿಗೆ ಅರಿವು ನೀಡುತ್ತಿದ್ದಾರೆ.


Be the first to comment on "ಅಳಿವಿನಂಚಿನ ಪಕ್ಷಿಗಳ ಉಳಿವಿಗೆ ದಂಪತಿಯ ಕರ್ನಾಟಕ ಯಾತ್ರೆ"