
ಬಂಟ್ವಾಳ: ಬಂಟ್ವಾಳದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಶನಿವಾರ ನಡೆಯಿತು.
ಆರಂಭದಲ್ಲಿ ಆರಕ್ಷಕ ಇಲಾಖೆ, ಗೃಹರಕ್ಷಕದಳ, ವಿದ್ಯಾರ್ಥಿಗಳಿಂದ ಪಥ ಸಂಚಲನ ಬಳಿಕ ತಹಸೀಲ್ದಾರ್ ಜಿ. ಮಂಜುನಾಥ್ ಅವರಿಂದ ಧ್ವಜಾರೋಹಣ ನಡೆಯಿತು. ಅತಿಥಿಗಳು ಪಥಸಂಚಲನ ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕನ್ನಡ, ನಾಡು, ನುಡಿಗೆ ಹೋರಾಡಿದವರ ನೆನಪು ಮಾಡಿಕೊಳ್ಳುವುದರ ಜೊತೆಗೆ ವಿಶ್ವಕ್ಕೆ ಮಾದರಿಯಾಗಿ ಕನ್ನಡಿಗರು ಮುನ್ನಡೆಯುವುದು ಇಂದು ಅಗತ್ಯವಾಗಿದೆ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿನಿ ಸಜಿನಾ ರಾಜ್ಯೋತ್ಸವ ನಿಮಿತ್ತ ಭಾಷಣ ಮಾಡಿ, ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನ ಗಳಿಸುವಂತೆ ನಮ್ಮ ಪ್ರಯತ್ನಗಳು ಸಾಗಬೇಕು, ಕರ್ನಾಟಕ ವಿಶ್ವಕ್ಕೆ ಅನೇಕ ಮಹನೀಯರನ್ನು ಸಾಧಕ ಕ್ಷೇತ್ರಕ್ಕೆ ಕೊಟ್ಟಿರುವುದಾಗಿ ತಿಳಿಸಿದರು.

ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.



Be the first to comment on "ಬಂಟ್ವಾಳದಲ್ಲಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ"