
ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಹೋಟೆಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕದ ಸಹಕಾರದೊಂದಿಗೆ ಯಶಸ್ವಿ ಏಳನೇ ವರ್ಷದ ಕಲ್ಲಡ್ಕದ ಪಿಲಿ 2025 ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ರಾಮಾಂಗಣದಲ್ಲಿ ಉದ್ಯಮಿ ಎನ್ ರಾಜೇಂದ್ರ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಈ ಸಂದರ್ಭ, ಕಲ್ಲಡ್ಕದಲ್ಲಿ ಸೇವೆ ನೀಡುತ್ತಿರುವ ವೈದ್ಯರನ್ನು ಗೌರವಿಸಿ ಮಾತನಾಡಿ, ಕಲ್ಲಡ್ಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿ ಅವರ ಸಮ್ಮುಖದಲ್ಲಿ ಜನರಿಗೆ ತುರ್ತು ಅಗತ್ಯ ಇರುವಂಥ ತುರ್ತು ಚಿಕಿತ್ಸೆ ವಾಹನ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ ಮಾಡುವ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಪನೆ ಪ್ರಸಂಶನೀಯವಾದದ್ದು ಎಂದು ವಾಹನವನ್ನು ಲೋಕಾರ್ಪಣೆ ಮಾಡಿದರು.

ವಾಹನದ ಜವಾಬ್ದಾರಿಯನ್ನು ವಹಿಸಿಕೊಂಡ ಮಿಥುನ್ ಪೂಜಾರಿ ಅವರಿಗೆ ವಾಹನದ ಕೀಲಿಕೈ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ಜರಗಿತು.
ವೈದ್ಯರಾದ ಡಾ. ಕಮಲಾ ಪ್ರಭಾಕರ್ ಭಟ್, ಡಾ. ರೇಷ್ಮಾ ಉಳ್ಳಾಲ್, ಡಾ. ಎಚ್ ರಾಜೀವ ಶೆಟ್ಟಿ, ಡಾ. ಚಂದ್ರಶೇಖರ್, ಡಾ. ಶೈಲೇಂದ್ರ ಎಸ್ ಎಸ್, ಡಾ.ರವಿಕಿರಣ್, ಡಾ. ಮನೋಜ್, ಡಾ. ಕೆ ಆರ್ ಎಸ್ ಕಿನಿಲಾ, ಡಾ ಸುಕೇಶ್ ಕಲ್ಲಡ್ಕ, ಡಾ.ಪ್ರಶಾಂತ್ ಕುಮಾರ್ ಕಲ್ಲಡ್ಕ, ಹೈಕೋರ್ಟಿನ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್, ಗಣಪತಿ ಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಕಲಾಮಯಂ ಉಡುಪಿ ಅವರಿಂದ ಜಾನಪದ ಕಲರವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ, ವೈವಾಹಿಕ ಜೀವನದಲ್ಲಿ ಮೂರು ದಶಕ ಪೂರ್ಣಗೊಳಿಸಿದ ದಂಪತಿಗಳ ಸಂಗಮ ನಿತ್ಯದಂಪತಿ ಕಾರ್ಯಕ್ರಮ, 1ರಿಂದ 9 ವರ್ಷ ದ ಮಕ್ಕಳಿಗೆ ಬಾಲಭೋಜನ ಕಾರ್ಯಕ್ರಮ ಜರಗಿತು.
ನಾಗ ಸುಜ್ಞಾನ ಫ್ರೆಂಡ್ಸ್ ಮುಖ್ಯಸ್ಥರಾದ ನಾಗರಾಜ್ ಕಲ್ಲಡ್ಕ ಸ್ವಾಗತಿಸಿ, ಪ್ರದೀಪ್ ಕೆಂಪುಗುಡ್ಡೆ ವಂದಿಸಿದರು. ಕುಮಾರ್ ವಿಟ್ಲ ಹಾಗೂ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.


Be the first to comment on "Kalladka: ಕಲ್ಲಡ್ಕ: ವೈದ್ಯರ ಸಮ್ಮುಖದಲ್ಲಿ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ"