ಯಾರಿಗಾದರೂ ತೊಂದರೆ ಉಂಟಾಗಿ ಮುಖ್ಯವಾದ ಶಸ್ತ್ರಚಿಕಿತ್ಸೆ ನಡೆಯಬೇಕು ಎಂಬ ಪರಿಸ್ಥಿತಿ ಇದ್ದರೆ ಗಮನಿಸಿ.. ಬಂಟ್ವಾಳದಲ್ಲಿಲ್ಲ ಬ್ಲಡ್ ಸ್ಟೋರೇಜ್ ಯುನಿಟ್. (ರಕ್ತ ಸಂಗ್ರಹ ಘಟಕ). ಏನಿದ್ದರೂ ಮಂಗಳೂರಿಗೇ ಹೋಗಬೇಕು.
ನೂರು ಹಾಸಿಗೆ, ಅಂದವಾದ ಕಟ್ಟಡ ಇರುವ ಆಸ್ಪತ್ರೆಗಳು ಕಾಣಿಸುವ ಬಂಟ್ವಾಳದಲ್ಲಿ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯನ್ನಷ್ಟೇ ಮಾಡಬೇಕು. ಎಮರ್ಜೆನ್ಸಿ ಇದ್ದರೆ ಮಂಗಳೂರೇ ಗತಿ.

BANTWAL HOSPITAL
ವರ್ಷಗಳ ಹಿಂದೆಯೇ ತಾಲೂಕು ಆರೋಗ್ಯ ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನೆನೆಪೋಲೆಯನ್ನೂ ಕಳುಹಿಸಿತ್ತು. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ರೋಟರಿ ಕ್ಲಬ್ ಬಂಟ್ವಾಳ ಕಳೆದ ವರ್ಷವೇ ಸುಸಜ್ಜಿತ ಬ್ಲಡ್ ಬ್ಯಾಂಕ್ ಸ್ಥಾಪಿಸಿತ್ತು. ಆದರೆ ಅದಕ್ಕೆ ತಾಂತ್ರಿಕ ಅನುಮೋದನೆ ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ಕಾರಣ ವಿಧ್ಯುಕ್ತವಾಗಿ ಕಾರ್ಯಾಚರಿಸಲು ಸಾಧ್ಯವಾಗುತ್ತಿಲ್ಲ.

ಪ್ರಸೂತಿತಜ್ಞರೂ ಇಲ್ಲ: ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಸೂತಿತಜ್ಞರು ಇಲ್ಲ ಎಂಬುದು ಹಳೆಯ ವಿಷಯ. ಸಾಕಷ್ಟು ಬಾರಿ ಈ ಕುರಿತು ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಹೆರಿಗೆ ಸಂದರ್ಭ ಸಮಸ್ಯೆಗಳುಂಟಾದಾಗ ತುರ್ತು ರಕ್ತದ ಅವಶ್ಯಕತೆ ಇರುತ್ತದೆ. ಆಗ ಬ್ಲಡ್ ಬ್ಯಾಂಕ್ ಉಪಯೋಗಕ್ಕೆ ದೊರಕುತ್ತದೆ. ಪ್ರಸ್ತುತ ಬಂಟ್ವಾಳದವರು ರಕ್ತ ಬೇಕು ಎಂದಾದರೆ ಮಂಗಳೂರಿಗೆ ಹೋಗಬೇಕು.
ಇಲ್ಲವೇ ವೆನ್ಲಾಕ್ ಬ್ಲಡ್ಬ್ಯಾಂಕ್ನಿಂದ ರಕ್ತ ತರಿಸಿಟ್ಟುಕೊಂಡು ಬಳಿಕ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ ಇದೆ. ತಕ್ಷಣಕ್ಕೆ ರಕ್ತ ಸಿಗದೇ ಇದ್ದರೆ ಅಪಘಾತ, ಹೆರಿಗೆ ಮತ್ತಿತರ ತುರ್ತು ಸಂದರ್ಭ ಮೇಜರ್ ಸರ್ಜರಿ ಮಾಡಲು ಸಾಧ್ಯವಾಗುತ್ತಿಲ್ಲ. ಬಂಟ್ವಾಳದಲ್ಲೇ ರಕ್ತ ಸಂಗ್ರಹಣ ಘಟಕ ಕಾರ್ಯರೂಪಕ್ಕೆ ಬಂದರೆ, ಮಂಗಳೂರಿನಲ್ಲಿರುವ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ನಿಂದ ಎಲ್ಲ ಗುಂಪಿನ ರಕ್ತವನ್ನು ಇಲ್ಲಿ ದಾಸ್ತ್ತಾನಿಟ್ಟು ಅಗತ್ಯ ಸಂದರ್ಭ ಬಳಸಿಕೊಳ್ಳಲು ಸಾಧ್ಯ. ರಕ್ತ ಸಂಗ್ರಹ ಘಟಕ ಇಲ್ಲದೆ ಇರುವುದರಿಂದ ಇಲ್ಲಿನ ಖಾಸಗಿ ಆಸ್ಪತ್ರೆಗಳಿಗೂ ತೊಂದರೆಯಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಸಾಗಿಸಲಾಗುತ್ತದೆ. ಒಂದು ವೇಳೆ ಇಲ್ಲೇ ರಕ್ತ ಲಭ್ಯತೆ ಇದ್ದರೆ ಮಂಗಳೂರಿಗೆ ಕಳುಹಿಸುವ ಬದಲು ಶಸ್ತ್ರಚಿಕಿತ್ಸೆ ಇಲ್ಲೇ ಮಾಡಬಹುದು.


Be the first to comment on "ಬಂಟ್ವಾಳ ತಾಲೂಕಿಗೆ ರಕ್ತ ಸಂಗ್ರಹ ಘಟಕ (ಬ್ಲಡ್ ಸ್ಟೋರೇಜ್ ಯುನಿಟ್) ಕೊರತೆ"