

ಸಂವಾದಗಳಿಂದ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಒಬ್ಬರಿಗೊಬ್ಬರು ಮಿಡಿಯುವ ಪರಸ್ಪರ ಸ್ಪಂದಿಸುವ ಭಾವನೆಯೇ ನಿಜವಾದ ಮಾನವೀಯತೆ. ಅದು ಭೂಮಿಯನ್ನು ಸ್ವರ್ಗ ಮಾಡುವಂತಹದ್ದು. ವೈಯುಕ್ತಿಕವಾಗಿ ಸುಧಾರಿಸಿಕೊಂಡು ಸಾಧ್ಯವಾದಷ್ಟು ಒಳಿತಿಗೆ ಸಮಾಜದಲ್ಲಿ ಹರಡಲು ಶ್ರಮಿಸಬೇಕು. ಸೌಹಾರ್ದತೆ ಮಾತುಗಳಿಗೆ ಸೀಮಿತವಾಗದೆ ಬದುಕಲ್ಲಿ ಅಳವಡಿಕೆ ಆಗಬೇಕಾಗಿದೆ. ನಮ್ಮ ಜೀವನವು ಉಳಿದವರಿಗೆ ಸಂದೇಶವಾಗಬೇಕಾಗಿದೆ.ಎಂದು ದೀಪಿಕಾ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು

ಬಿ.ಸಿ.ರೋಡಿನ ಲಯನ್ಸ್ ಸೇವಾ ಸದನದಲ್ಲಿ ನಡೆದ ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್ (ಸ) ಅಭಿಯಾನದ ಪ್ರಯುಕ್ತ ಸೀರತ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ ಬರಕ ಇಂಟರ್ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜ್ ಮಂಗಳೂರು ಪ್ರಿನ್ಸಿಪಾಲ್ ಶರ್ಫುದ್ದೀನ್ ಬಿ ಎಸ್ ಮಾತನಾಡುತ್ತಾ, ಯಾವುದೇ ಧರ್ಮ ದ್ವೇಷ ಕಲಿಸದು ದ್ವೇಷ ಹರಡುವ ವ್ಯಕ್ತಿ ಯಾವುದೇ ಧರ್ಮದ ಅನುಯಾಯಿಗಳು ಸಾಧ್ಯವಿಲ್ಲ ಸೌಹಾರ್ದತೆಯ ವಾತಾವರಣದಿಂದ ಸಮಾಜ ಅಭಿವೃದ್ಧಿ ಹೊಂದುತ್ತದೆ. ಅಭದ್ರತೆಯ ವಾತಾವರಣದಿಂದ ದೇಶವು ಮುಕ್ತವಾಗಬೇಕಾಗಿದೆ. ಸೌಹಾರ್ದತೆ ವಾತಾವರಣವು ಈ ದೇಶದಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗುತ್ತದೆ. ಎಂದು ಹೇಳಿದರು.
ಮತ್ತೋರ್ವ ಅತಿಥಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮಾತನಾಡುತ್ತಾ ಮನುಷ್ಯನು ಸಂಘ ಜೀವಿ. ನಮ್ಮ ದೇಶವು ವೈವಿಧ್ಯತೆ ದೇಶವಾಗಿದೆ ನಕಾರಾತ್ಮಕ ಜನಗಳಿಂದ ನಾವು ದೂರವಿರಬೇಕು. ಅವರು ಎಲ್ಲ ಪರಿಹಾರಗಳಿಗೂ ಸಮಸ್ಯೆ ಉಂಟು ಮಾಡುತ್ತಾರೆ. ನಮ್ಮಲ್ಲಿ ಅಭಿಪ್ರಾಯ ಭೇದವಿದ್ದರೂ ಒಗ್ಗಟ್ಟಾಗಿರಲು ಸೌಹಾರ್ದತೆಯನ್ನು ಬದುಕಲ್ಲಿ ಅಳವಡಿಸೋಣ ಎಂದು ಹೇಳಿದರು. ವೇದಿಕೆಯಲ್ಲಿ ಸೀರತ್ ಅಭಿಯಾನದ ಸ್ವಾಗತ ಸಮಿತಿಯ ಸಂಚಾಲಕರಾದ ಅಬ್ದುಲ್ಲಾ ಚೆಂಡಾಡಿ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಮುಕ್ತಾರ್ ಅಹಮದ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಲೀಮ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಮೌಲಾನ ಶಹಾದತ್ ಕುರ್ ಆನ್ ಪಠಿಸಿದರು.


Be the first to comment on "ಪರಸ್ಪರ ಸ್ಪಂದಿಸುವ ಭಾವನೆಯೇ ನಿಜವಾದ ಮಾನವೀಯತೆ: ಮಹಾಬಲೇಶ್ವರ ಹೆಬ್ಬಾರ"