ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಮತ್ತು ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿಯ ಸಾಮಾನ್ಯ ಸಭೆ ಬಿ.ಸಿ ರೋಡಿನ ಸರಕಾರಿ ನೌಕರರ ಸಭಾಂಗಣದಲ್ಲಿ ನಡೆಯಿತು.


ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಪುಷ್ಪರಾಜ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಸೂಕ್ಷ್ಮ ಪ್ರದೇಶವಾಗಿದ್ದು ತಡ ರಾತ್ರಿಯವರೆಗೆ ಅನುಮತಿ ನೀಡದಂತೆ ಪೋಲಿಸ್ ಇಲಾಖೆಗೆ ಮನವಿ ನೀಡುವುದು, ತಾಲೂಕಿನ ತೀರ್ಪುಗಾರರ ಮಂಡಳಿಯ ಎಲ್ಲಾ ಸದಸ್ಯರಿಗೂ ತೀರ್ಪುಗಾರರ ಮಂಡಳಿಯ ವತಿಯಿಂದ ಉಚಿತ ಹೆಲ್ತ್ ಇನ್ಸೂರೆನ್ಸ್ ಮಾಡುವುದು, ಈ ಬಗ್ಗೆ ನವೆಂಬರ ತಿಂಗಳಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು, ಮತ್ತು ಮಂಡಳಿಯ ಎಲ್ಲಾ ಸದಸ್ಯರಿಗೆ ಕಾನೂನಾತ್ಮಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸದಸ್ಯತನದ ಕಾರ್ಡ್ ಮಾಡಿಸುವುದು, ತಾಲೂಕಿನಲ್ಲಿ ಒಂದೇ ದಿನ ಹತ್ತಾರು ಪಂದ್ಯಾಟಗಳನ್ನು ಆಯೋಜಿಸಿವುದನ್ನು ತಪ್ಪಿಸುವ ಮತ್ತು ಸ್ಥಳಿಯ ಕಬ್ಬಡ್ಡಿ ಆಟಗಾರರಿಗೆ ಅವಕಾಶ ಒದಗಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಡೆಯುವ ಎಲ್ಲಾ ಹಂತದ ಕಬ್ಬಡ್ಡಿ ಪಂದ್ಯಾಟಗಳಿಗೂ ಬಂಟ್ವಾಳ ತಾಲೂಕು ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ನ ಪೂರ್ವಾನುಮತಿ ಕಡ್ಡಾಯಗೊಳಿಸುವುದು, ಆಯಾಯ ಹಂತದ ಕಬ್ಬಡಿ ಪಂದ್ಯಾಟದಲ್ಲಿ ಆಯಾಯ ಹಂತದ ಕಬಡ್ಡಿ ಆಟಗಾರರು ಮಾತ್ರ ಆಡುವಂತೆ ಕಡ್ಡಾಯಗೊಳಿಸುವುದು, ತೀರ್ಪುಗಾರರ ಮತ್ತು ಆಟಗಾರರ ಆರೋಗ್ಯದ ದೃಷ್ಟಿಯಿಂದ ತಾಲೂಕಿನಲ್ಲಿ ನಡೆಯುವ ಎಲ್ಲಾ ಪಂದ್ಯಾಟಗಳು ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಅಥವಾ ಪ್ರೊ ಕಬಡ್ಡಿಯ ಮಾದರಿ ನಿಯಮಾವಳಿಯಂತೆ ನಡೆಸುವುದು ಎಂಬ ಪ್ರಮುಖ ನಿರ್ಣಯಗಳಿಗೆ ತಾಲೂಕು ಅಮೆಚೂರ್ ಕಬಡ್ಡಿ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಸುರೇಶ್ ಮೈರಡ್ಕ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡಿ ಅಮೆಚೂರ್ ಆಸೋಸಿಯೇಷನ್ ನ ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಕುಮಾರ್ , ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷರುಗಳಾದ ಕೃಷ್ಣಪ್ಪ ಬಂಗೇರ, ಬಾಬು ಮಾಸ್ಟರ್, ನಾಗೇಶ್ ಪೂಜಾರಿ, ಬಂಟ್ವಾಳ ತೀರ್ಪುಗಾರರ ಮಂಡಳಿಯ ಕನ್ವೀನರ್ ಹಬೀಬ್ ಮಾಣಿ ಭಾಗವಹಿಸಿದ್ದರು.
ಇದೇ ವೇಳೆ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಂಟ್ವಾಳ ತೀರ್ಪುಗಾರರ ಮಂಡಳಿಯ ಸದಸ್ಯ, ನ್ಯಾಯವಾದಿ ದೀಪಕ್ ಪೆರಾಜೆ ಅವರನ್ನು ಗೌರವಿಸಲಾಯಿತು. ಅಮೆಚೂರ್ ಕಬಡ್ಡಿ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಸುರೇಶ್ ಮೈರಡ್ಕ ಸ್ವಾಗತಿಸಿ, ಸದಸ್ಯರಾದ ರವಿ ಅಂಚನ್ ವಂದಿಸಿದರು, ದೀಪಕ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು


Be the first to comment on "ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿ ಸಭೆ"