
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂಬ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ಸಾಗುತ್ತಿದ್ದು, ಹೋರಾಟಕ್ಕೀಗ ವೇಗ ದೊರಕಿದೆ. ಈ ಕುರಿತು ಸಂಘ, ಸಂಸ್ಥೆಗಳು, ಕಾಲೇಜುಗಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳಾಗಿದ್ದು, ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ವೇಳೆ ಪೀಠ ಘೋಷಣೆಯಾಗುವಂತೆ ಒತ್ತಡ ಹೇರಲಾಗುವುದು ಎಂದು ಹೈಕೋರ್ಟ್ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ರೂಪಿಸಲಾದ ಹೋರಾಟ ಸಮಿತಿ ಅಧ್ಯಕ್ಷ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಹೇಳಿದ್ದಾರೆ.

ಗುರುವಾರ ಸಂಜೆ ಬಿ.ಸಿ.ರೋಡಿನ ಹೋಟೆಲ್ ಕೃಷ್ಣಿಮಾದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಾರ್ ಅಸೋಸಿಯೇಷನ್ ವತಿಯಿಂದ ನಡೆದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಮಹಾರಾಷ್ಟ್ರದಲ್ಲಿ ಈಗಾಗಲೇ ಹೈಕೋರ್ಟ್ ನಾಲ್ಕು ಪೀಠಗಳಿದ್ದು, ಕರ್ನಾಟಕದಲ್ಲೂ ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಬೆಂಗಳೂರು ಹೈಕೋರ್ಟ್ ನಲ್ಲಿರುವ ಕೇಸುಗಳಲ್ಲಿ ಶೇ.40ರಷ್ಟು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರಿಗೆ ಸಂಬಂಧಿಸಿದ್ದಾಗಿದ್ದು, ಈ ಜಿಲ್ಲೆಗಳ ಜನರಿಗೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠವಾದರೆ ಅನುಕೂಲವಾಗಲಿದೆ. ಈಗಾಗಲೆ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಯಿಂದ ಹಲವು ಉದ್ಯೋಗಾವಕಾಶಗಳು ತೆರೆಯಲಿದ್ದು, ನ್ಯಾಯದಾನ ಪ್ರಕ್ರಿಯೆಯೂ ತ್ವರಿತವಾಗುತ್ತದೆ. ಈ ನಿಟ್ಟಿನಲ್ಲಿ ಜಾಥಾವೊಂದನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಾಗಿರುವ ನ್ಯಾಯವಾದಿಗಳಾದ ಯು.ಟಿ.ಖಾದರ್, ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಐವನ್ ಡಿಸೋಜ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಹಿತ ಎಲ್ಲ ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಸರಕಾರಕ್ಕೆ ಒತ್ತಡ ಹೇರುವ ಕಾರ್ಯ ಮಾಡಲಾಗುತ್ತಿದೆ ಎಂದರು.
ದ.ಕ.ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ರಿಚರ್ಡ್ ಎಂ.ಕೋಸ್ತಾ, ಉಪಾಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ವಸಂತ ಮರಕಡ, ಜಗನ್ನಾಥ ರೈ ಜಿ, ಹರೀಶ್ ಪಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ, ಕೋಶಾಧಿಕಾರಿ ಜೆಸಿಂತಾ ಕ್ರಾಸ್ತಾ, ವಕೀಲರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು


Be the first to comment on "MANGALORE HIGH COURT BENCH: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಮತ್ತಷ್ಟು ಚುರುಕು"