
ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಬಳಿಯ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೃಷಿಕ ಸಮಾಜ ಭವನ ಸೆ. 1ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಹೇಳಿದರು.
ಅವರು ಶುಕ್ರವಾರ ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೃಷಿಕ ಸಮಾಜವು ಇಲಾಖೆ ಹಾಗೂ ಕೃಷಿಕರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು, ರಾಜ್ಯ ಮಟ್ಟದಲ್ಲಿ ಕೃಷಿ ಸಚಿವರು ಕೃಷಿಕ ಸಮಾಜದ ಅಧ್ಯಕ್ಷರಾಗಿರುತ್ತಾರೆ. ಬಂಟ್ವಾಳದಲ್ಲಿ ಸಮಾಜಕ್ಕೆ ಮಂಜೂರಾದ 7 ಸೆಂಟ್ಸ್ ನಿವೇಶನದಲ್ಲಿ ಕಟ್ಟಡ ನಿರ್ಮಿಸಬೇಕು ಎಂದು ೨೫ ವರ್ಷಗಳ ಹಿಂದೆ ಶಿಲಾನ್ಯಾಸ ನಡೆದಿದ್ದು, ಆದರೆ ಹಲವು ಕಾರಣಕ್ಕೆ ಅದು ವಿಳಂಬವಾಗಿತ್ತು. ಪ್ರಸ್ತುತ ಸುಮಾರು ೯೫ ಲಕ್ಷ ರೂ.ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡಕ್ಕೆ ಯೋಜನೆ ಹಾಕಿ ಒಂದು ಹಂತದ ಕಾಮಗಾರಿಯನ್ನು ೬೦ ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುತ್ತದೆ. ಕಟ್ಟಡಕ್ಕೆ ರಾಜ್ಯ ಸಮಾಜದಿಂದ ೨೭.೫೦ ಲಕ್ಷ ರೂ. ಅನುದಾನ ಬಂದಿದ್ದು, ಉಳಿದಂತೆ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಉಳಿದಂತೆ ತಾಲೂಕು ಸಮಾಜದ ಪದಾಽಕಾರಿಗಳೇ ಹಣ ಹಾಕಿ ಕಟ್ಟಡ ನಿರ್ಮಿಸಲಾಗಿದ್ದು, ಮುಂದೆ ಜನಪ್ರತಿನಿಧಿಗಳ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಕಟ್ಟಡ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ, ಕಟ್ಟಡವನ್ನು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಬಿ.ಸಿ.ರೋಡಿನ ಡಾ| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಆಡಳಿತ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್, ರಾಜ್ಯಸಭಾ ಸದಸ್ಯ ಡಾ| ಡಿ.ವೀರೇಂದ್ರ ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಅಶೋಕ್‌ಕುಮಾರ್ ರೈ, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಬಿ.ಕೆ.ಹರಿಪ್ರಸಾದ್, ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಬೊಟ್ಯಾಡಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಕೃಷಿ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ವಿಜೇತ ಮಹಿಳೆಯರಿಗೆ ಸಮಾರಂಭದಲ್ಲಿ ಸಮ್ಮಾನ, ತಾಲೂಕಿನ ಕೃಷಿ ಸಖಿ-ಪಶು ಸಖಿಯರಿಗೆ ಅಭಿನಂದನೆ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳಾದ ಉಮ್ಮರ್ ಬಿ, ಆಲ್ಬರ್ಟ್ ಮಿನೇಜಸ್, ರಮಾನಾಥ ವಿಟ್ಲ, ಗಣೇಶ್ ಶೆಟ್ಟಿ ಗೋಳ್ತಮಜಲು, ಬದ್ರುದ್ದೀನ್ ಮಂಚಿ, ರಮೇಶ್ ನೆಟ್ಲ ಉಪಸ್ಥಿತರಿದ್ದರು.


Be the first to comment on "Bantwal: ಸೆ.1ರಂದು ಬಂಟ್ವಾಳದ ಕೃಷಿಕ ಸಮಾಜ ಭವನ ಉದ್ಘಾಟನೆ"