ವಿಟ್ಲ: ಸ್ವಾತಂತ್ರ್ಯ ವೀರರ ಜೀವನಚರಿತ್ರೆಯನ್ನು ಪ್ರತಿ ವಿದ್ಯಾರ್ಥಿಯೂ ಅರಿತು ಪ್ರೇರಣೆ ಪಡೆಯುವುದು ಅಗತ್ಯ – ಎಂದು ಹಿರಿಯರಾದ ಮುರುವ ನಡುಮನೆ ಮಹಾಬಲ ಭಟ್ ಹೇಳಿದ್ದಾರೆ. ಅವರು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಉಮಾನಾಥ ರೈ ಮೇರಾವು ಅವರ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ ಮತ್ತು 2024-25 ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ಊರಿನ ಗಣ್ಯರ ಉಪಸ್ಥಿತಿಯಲ್ಲಿ ನಡೆಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ವಹಿಸಿ ಮಾತನಾಡಿದರು. ಮುಖ್ಯಶಿಕ್ಷಕಿ ಲತಾ ಯು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲೆಯಲ್ಲಿ 10 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉಮಾನಾಥ ರೈ ಮೇರಾವು ಅವರನ್ನು ಆತ್ಮೀಯವಾಗಿ ಬೀಳ್ಕೊಡುವುದರ ಜೊತೆಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಮಾಣಿಲ ಗ್ರಾಮ ಪಂಚಾಯತ್, ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ದ ವತಿಯಿಂದಲೂ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಭುವನೇಶ್ವರ ಸಿ ಮಡಗಾಂವಕರ್ ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕಿ ಕವಿತಾ ಕೆ ಸನ್ಮಾನ ಪತ್ರ ವಾಚಿಸಿದರು. ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಸನ್ಮಾನಿತರನ್ನು ನೌಕರರ ಪರವಾಗಿ ಅಭಿನಂದಿಸಿ ಮಾತನಾಡಿದರು.
2024 – 25ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಶಾಲೆ ವತಿಯಿಂದ ಪುರಸ್ಕರಿಸಿ ಅಭಿನಂದಿಸಲಾಯಿತು. 618 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಶೈನಾ ಲಿಶಾ ಮೊಂತೆರೋ , 610 ಅಂಕಗಳನ್ನು ಪಡೆದ ಆಶಿಕಾ ಎಸ್, 594 ಅಂಕಗಳನ್ನು ಗಳಿಸಿದ ವರ್ಷಾ, 585 ಅಂಕಗಳನ್ನು ಪಡೆದ ಮನ್ವಿ ಕೆ ಹಾಗೂ 570 ಅಂಕಗಳನ್ನು ಗಳಿಸಿದ ಅಶ್ವಥ್ ಸಹಿತ ಉತ್ತಮ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್ ಮಂಚಿ ಸಾಲೆತ್ತೂರು ಪ್ರಸ್ತುತ ಅಧ್ಯಕ್ಷರಾಗಿರುವ ಉಮಾನಾಥ ರೈ ಮೇರಾವು ಇವರು ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳನ್ನು ಕ್ಲಬ್ ವತಿಯಿಂದ ಗೌರವಿಸಿ ಅಭಿನಂದಿಸಿದರು..
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು , ಪಂಚಾಯತ್ ಸದಸ್ಯ ರಾಜೇಶ್ ಬಾಳೆಕಲ್ಲು, ಸಂಸ್ಥೆಯ ನಿವೃತ್ತ ಮುಖ್ಯಗುರುಗಳಾದ ಸುಬ್ರಹ್ಮಣ್ಯ ಭಟ್ ಕೆ.ಜೆ. ಮಾತನಾಡಿ ಸನ್ಮಾನಿತರನ್ನು ಅಭಿನಂದಿಸಿ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಲಯನ್ ಡಾ| ಗೋಪಾಲ ಆಚಾರ್, ಲಯನ್ಸ್ ಮಂಚಿ ಕೊಳ್ನಾಡು ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ಎಸ್ ಡಿ ಎಂಸಿ ಸದಸ್ಯರಾದ ವಿಷ್ಣು ಕನ್ನಡಗುಳಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಥುನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕ ಸುಧೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಭಾಷಾ ಶಿಕ್ಷಕ ಸಂದೇಶ್ ವಂದಿಸಿದರು. ವಿಜ್ಞಾನ ಶಿಕ್ಷಕಿ ಮಮತಾ ರಾವ್ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ ತನುಶ್ರೀ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರುಗಳು, ಎಸ್ ಡಿ ಎಂಸಿ ಸರಸ್ಯರು, ವಿದ್ಯಾರ್ಥಿಗಳ ಪೋಷಕರು ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು



Be the first to comment on "ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಉಮಾನಾಥ ರೈ ಮೇರಾವು ಅವರಿಗೆ ಬೀಳ್ಕೊಡುಗೆ"