
ಬಂಟ್ವಾಳ: ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ (68) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ. ಅವರು ಪುತ್ರ, ಪುತ್ರಿಯನ್ನು ಹೊಂದಿದ್ದರು.

1957 ಏಪ್ರಿಲ್ ನಲ್ಲಿ ಜನಿಸಿದ ಅವರು, ಶಾಂತಾರಾಮ ಕಲ್ಲಡ್ಕ ಅವರ ಮಿತ್ರಬಳಗ ಕಲಾತಂಡದ ಮೂಲಕ ತನ್ನ ರಂಗಪಯಣವನ್ನು ಎಳವೆಯಲ್ಲೇ ಆರಂಭಿಸಿದ್ದರು,. ಬಳಿಕ ಶಾಂತಾರಾಮ ಕಲ್ಲಡ್ಕ ಅವರ ತುಳುವಪ್ಪೆ ಜೋಕುಲು ಕಲಾಬಳಗದಲ್ಲೂ ತೊಡಗಿಸಿಕೊಂಡ ರಮೇಶ್, ತುಳು ವೃತ್ತಿ ರಂಗಭೂಮಿ ಪ್ರವೇಶಿಸಿದರು. ಬಳಿಕ ಕಲ್ಲಡ್ಕದಲ್ಲಿ ಮೈತ್ರಿ ಕಲಾವಿದರು ತಂಡ ಸ್ಥಾಪಿಸಿ, ಕಲ್ಲಡ್ಕ ಶಾರದೋತ್ಸವದಲ್ಲಿ ತಂಡದ ನಾಟಕ ಪ್ರದರ್ಶಿಸುತ್ತಿದ್ದರು
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿ ಸುದೀರ್ಘ ಕಾಲ ತನ್ನ ವೃತ್ತಿಪಯಣವನ್ನು ನಡೆಸಿದ ಅವರು ಆ ತಂಡದ ಹಿರಿಯ ಹಾಗೂ ಪ್ರಮುಖ ಕಲಾವಿದರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದ ರಮೇಶ್ ಕಲ್ಲಡ್ಕ ಅವರ ನಿಧನಕ್ಕೆ ತುಳುರಂಗಭೂಮಿ ಆಘಾತಗೊಂಡಿದೆ. ಒರಿಯರ್ದೊರಿ ಅಸಲ್, ಮದಿಮೆ ಸಹಿತ ಕೊಡಿಯಾಲ್ ಬೈಲ್ ಅವರ ಜನಪ್ರಿಯ ತುಳು ನಾಟಕಗಳಲ್ಲಿ ರಮೇಶ್ ಅವರು ಗಮನ ಸೆಳೆದಿದ್ದರೆ, ಇತ್ತೀಚಿನ ಶಿವದೂತಗುಳಿಗೆ, ಶಿವಾಜಿ ನಾಟಕಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಅವರು ಕಲ್ಲಡ್ಕ ಪರಿಸರದ ಶಾರದೋತ್ಸವ ಸಮಿತಿ ಸಹಿತ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಶಾರದೋತ್ಸವ ಸಮಿತಿಯ ಸ್ಥಾಪಕ ಟ್ರಸ್ಟಿಯಾಗಿದ್ದರು. ಉತ್ತಮ ನಿರೂಪಕರಾಗಿ ಅವರು ಗುರುತಿಸಿಕೊಂಡಿದ್ದರು.

OPTIC WORLD


Be the first to comment on "KALLADKA: ತುಳು ರಂಗಭೂಮಿ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ನಿಧನ"