ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ: ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ ಸಮೀಕ್ಷೆ , ಅನಕ್ಷರಸ್ಥರನ್ನು ಗುರುತಿಸಿ, ಅಕ್ಷರ ಬರೆಸುವ ಕಾರ್ಯ

1990-91ರಲ್ಲಿ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂದು ರಾಜ್ಯಮಟ್ಟದಲ್ಲೇ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಮತ್ತೆ ಅಕ್ಷರ ಬರೆಯಲು ಗೊತ್ತಿಲ್ಲದವರನ್ನು ಹುಡುಕಿ, ಸಾಕ್ಷರರನ್ನಾಗಿಸುವ ಕಾರ್ಯಕ್ಕೆ ವೇಗ ದೊರಕಿದೆ. ಕಳೆದ ಮೂರು ವರ್ಷಗಳಿಂದೀಚೆಗೆ ಜಿಲ್ಲೆಯ ಮೂಡುಬಿದಿರೆ, ಪುತ್ತೂರು ಮತ್ತು ಮೂಲ್ಕಿ ತಾಲೂಕುಗಳ ಗ್ರಾಮೀಣ ಭಾಗಗಳು ಸಂಪೂರ್ಣ ಸಾಕ್ಷರವೆಂದು ಘೋಷಣೆಯಾಗಿದ್ದರೆ, ಇದೀಗ ಬಂಟ್ವಾಳ ತಾಲೂಕು ಸಹಿತ ಉಳಿದೆಡೆಯು ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭಾನುವಾರ ಬಂಟ್ವಾಳ ತಾಲೂಕಿನ 44 ಗ್ರಾಮಗಳ 60 ಪರೀಕ್ಷಾ ಕೇಂದ್ರಗಳಲ್ಲಿ ವಯಸ್ಕರಿಗಾಗಿ ಪರೀಕ್ಷೆ ನಡೆದಿದ್ದು, 80ರ ಹರೆಯಕ್ಕೂ ಅಧಿಕ ವಯಸ್ಸಿನವರು ಸೇರಿ ಸುಮಾರು 635 ಮಂದಿ ಪೆನ್ ಹಿಡಿದುಕೊಂಡು ಅಕ್ಷರಾಭ್ಯಾಸ ಮಾಡಿದ್ದನ್ನು ಸಾಬೀತುಪಡಿಸಿದರು.

ಜಾಹೀರಾತು

ನಿರಂತರ ಪ್ರಕ್ರಿಯೆಯ ಭಾಗ:

ಬರೆಯಲು ಗೊತ್ತಿಲ್ಲದವರನ್ನು ಹುಡುಕಿ ಅವರಿಗೆ ಅಕ್ಷರಾಭ್ಯಾಸ ಮಾಡಿಸುವ ವಯಸ್ಕರ ಶಿಕ್ಷಣ ಇಲಾಖೆಯ ನಿರಂತರ ಪ್ರಕ್ರಿಯೆಯ ಭಾಗವಾಗಿ ಇದು ಮುಂದುವರಿಯುತ್ತಿದೆ. ಕಳೆದ ವರ್ಷ ಕೇಂದ್ರದ ನವಭಾರತ ಯೋಜನೆಯಡಿ ಪರೀಕ್ಷೆ ನಡೆದಿದ್ದರೆ, ಎರಡು ತಿಂಗಳ ಹಿಂದೆ ರಾಜ್ಯ ಸರಕಾರದ ಸಾವಿರ ಗ್ರಾಮ ಪಂಚಾಯತ್ ಯೋಜನೆಯಡಿ ಪರೀಕ್ಷೆ ನಡೆಯಿತು. ಈ ಬಾರಿ ರಾಜ್ಯ ಸರಕಾರದ ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ ಪರೀಕ್ಷೆ ನಡೆಯುತ್ತಿದೆ. ಇದುವರೆಗಿನ ಮಾಹಿತಿ ಆಧಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 223 ಗ್ರಾಪಂಗಳಲ್ಲಿ 115 ಗ್ರಾಪಂಗಳು ಸಾಕ್ಷರವೆಂದು ಘೋಷಣೆ ಮಾಡಲಾಗಿದೆ. ಉಳಿದವೂ ಆ ಹಂತದಲ್ಲಿವೆ.

OPTIC WORLD

ಹೇಗೆ ತಯಾರಾದರು?

ದಕ್ಷಿನ ಕನ್ನಡ ಜಿಲ್ಲಾ ಪಂಚಾಯಿತಿಯ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಅನಕ್ಷರಸ್ಥರ ಗುರುತಿಸುವಿಕೆಯಿಂದ ತೊಡಗಿ, ಅಕ್ಷರಾಭ್ಯಾಸ ಮಾಡಿಸುವ ಪ್ರಕ್ರಿಯೆಗೆ ಈ ಬಾರಿ ಬಂಟ್ವಾಳ ತಾಲೂಕನ್ನು ಆಯ್ಕೆ ಮಾಡಲಾಯಿತು.

ತಾಲೂಕು ಪಂಚಾಯಿತಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಸಮೀಕ್ಷೆ ನಡೆಸಿದಾಗ 857 ಮಂದಿ ಅನಕ್ಷರಸ್ತರೆಂದು ಗುರುತಿಸಲ್ಪಟ್ಟರು .ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ 44, ವೀರಕಂಭದಲ್ಲಿ 52 ಹೀಗೆ ಹಲವು ಗ್ರಾಮಗಳಲ್ಲಿ ಈ ರೀತಿಯಾಗಿ ಒಂದಕ್ಷರವೂ ಬರೆಯಲು ಅಸಾಧ್ಯವಾದ ವಯಸ್ಕರು ಕಂಡುಬಂದರು. ಅವರ ಮನವೊಲಿಸಿ, ಮನೆಯವರ ಸಹಕಾರದೊಂದಿಗೆ ಕಲಿಕಾ ಪುಸ್ತಕಗಳನ್ನು ಒದಗಿಸಿ, ಅಕ್ಷರಾಭ್ಯಾಸದ ತರಬೇತಿ ನೀಡಲಾಯಿತು. ಬಾಳಿಗೆ ಬೆಳಕು (ಓದುವ ಪುಸ್ತಕ), ಸವಿಬರಹ (ಬರೆಯುವ ಪುಸ್ತಕ) ಶೀರ್ಷಿಕೆಯ ಪುಸ್ತಕಗಳನ್ನು ಒದಗಿಸಲಾಯಿತು. ವಿಶೇಷವೆಂದರೆ ಹೆಚ್ಚಿನವರು ಹಿರಿಯ ನಾಗರಿಕರು ಆಗಿದ್ದರೂ ಉತ್ಸಾಹದೊಂದಿಗೆ ಕಲಿಕೆಯಲ್ಲಿ ಪಾಲ್ಗೊಂಡರು. ಭಾನುವಾರ ಅಷ್ಟೇ ಉತ್ಸಾಹದಿಂದ ಪರೀಕ್ಷೆ ಬರೆದಿದ್ದು, ಹೊರಬಂದ ಬಳಿಕ ಹನಿಗಣ್ಣಾದರು.

ಮೂರು ಭಾಗದಲ್ಲಿ ಪ್ರಶ್ನೆಪತ್ರಿಕೆ

ನಾಲ್ಕು ತಿಂಗಳ ಅವಧಿಯಲ್ಲಿ ಅಕ್ಷರಾಭ್ಯಾಸ ಕಲಿತವರಿಗಾಗಿಯೇ ಸರಳವಾದ ಹಾಗೂ ಅಷ್ಟೇ ವೈಜ್ಞಾನಿಕವಾಗಿ ತಯಾರಾದ ಪ್ರಶ್ನೆ ಪತ್ರಿಕೆ ಒದಗಿಸಲಾಗಿತ್ತು. ಇದರಲ್ಲಿ ಮೂರು ಭಾಗಗಳಾಗಿ ಪರೀಕ್ಷೆ ನಡೆಯಿತು. ಓದುವುದು, ಬರೆಯುವುದು ಹಾಗೂ ಸರಳ ಗಣಿತದ ಪ್ರಶ್ನೆಗಳಿಗೆ ಒತ್ತಕ್ಷರ, ಕಾಗುಣಿತವನ್ನು ನೆನಪಿಸಿಕೊಂಡು ವಯಸ್ಕರು ಉತ್ತರ ಬರೆದರು.

ಜಿಲ್ಲಾ ಅನುದಾನದ ಲಿಂಕ್ ಡಾಕ್ಯುಮೆಂಟ್ ಕಾರ್ಯಕ್ರಮದಡಿ ಕಳೆದ ನಾಲ್ಕು ತಿಂಗಳಿನಿಂದ ತರಬೇತಿ ನಡೆದಿದ್ದು, ಇದೀಗ ಪರೀಕ್ಷೆ ನಡೆದಿದೆ ಸಂಪೂರ್ಣ ಸಾಕ್ಷರತಾ ಜಿಲ್ಲೆಯತ್ತ ನಮ್ಮ ಪ್ರಯತ್ನ ಸಾಗುತ್ತಿದೆ. ಬಂಟ್ವಾಳ ತಾಲೂಕಿನ ನಗರ ಪ್ರದೇಶಗಳ ಸಮೀಕ್ಷೆ ಇನ್ನೂ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಅಲ್ಲೂ ಈ ಕಾರ್ಯ ನಡೆಸಲಾಗುತ್ತದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾಬಿ. ಟಿ.ಐ. ಹೇಳಿದರು.

ಗ್ರಾಮೀಣ ಬಾಗಗಳಲ್ಲಿರುವ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿಸುವ ಕಾರ್ಯವನ್ನು ಮಾಡುವ ಕಾರ್ಯಕ್ಕೆ ಬಂಟ್ವಾಳ ತಾಲೂಕು ಪಂಚಾಯಿತಿ ವತಿಯಿಂದ ಸಕಲ ನೆರವು ನೀಡಲಾಗಿದೆ.ಎಂದು ತಾಪಂ ಇಒ ಸಚಿನ್ ಕುಮಾರ್ ತಿಳಿಸಿದರು.

While the rural parts of Moodbidri, Puttur and Mulki taluks of the district have been declared fully literate for the past three years, work is now underway in the rest of the district, including Bantwal taluk.

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ: ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದೆ ಸಮೀಕ್ಷೆ , ಅನಕ್ಷರಸ್ಥರನ್ನು ಗುರುತಿಸಿ, ಅಕ್ಷರ ಬರೆಸುವ ಕಾರ್ಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*