ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಂಜೆ ಸಾಹಿತ್ಯ ಸಂಘ ಉದ್ಘಾಟನೆ, ಲಹರಿ ಭಿತ್ತಿಪತ್ರಿಕೆ ಅನಾವರಣ ಹಾಗೂ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಸಂಸ್ಮರಣೆಯ ಭಾವಗಾಯನ ಕಾರ್ಯಕ್ರಮ ನಡೆಯಿತು.

ಮೊಡಂಕಾಪು ದೀಪಿಕಾ ಪ್ರೌಢಶಾಲೆ ನಿವೃತ್ತ ಮುಖ್ಯಗುರುಗಳಾದ ಮಹಾಬಲೇಶ್ವರ ಹೆಬ್ಬಾರ ಅವರು ದೀಪ ಬೆಳಗಿಸಿ ಪಂಜೆ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಕಾಲೇಜು ವಿದ್ಯಾರ್ಥಿಗಳು ಸಿದ್ಧಪಡಿಸಿದ ಲಹರಿ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿದರು.

ಶಿಶು ಸಾಹಿತ್ಯದ ಜನಕ ಎಂದೇ ಹೆಸರಾದ ಬಂಟ್ವಾಳದ ಪಂಜೆ ಮಂಗೇಶರಾಯರು ( PANJE MANGESHA RAO) ಹೊಸಗನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಾದರಿ ಎನ್ನುವಂಥ ಕೃತಿಗಳನ್ನು ನೀಡಿದ್ದರೂ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ಸಿಕ್ಕಿಲ್ಲದೇ ಇರುವುದು ಖೇದಕರ. ಅವರ ಕೃತಿಗಳಲ್ಲಿ ಕಂಡುಬರುವ ನವಿರಾದ ಹಾಸ್ಯ, ವಿನೂತನ ಪದಬಳಕೆಗಳನ್ನು ಸೋದಾಹಣರವಾಗಿ ವಿವರಿಸಿದ ಅವರು, ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಓದಿ ಸಂಭ್ರಮಿಸುವ ಅಗತ್ಯವಿದೆ. ಅವರ ಹೆಸರಲ್ಲಿಯೇ ಸಾಹಿತ್ಯ ಸಂಘವನ್ನು ಆರಂಭಿಸಿರುವುದು ಅರ್ಥಪೂರ್ಣ. ಲಹರಿ ಭಿತ್ತಿಪತ್ರಿಕೆಯು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಮೂಡಿಸಲಿ ಅಭಿಪ್ರಾಯಪಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಮ್ಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆದ ರಾಧಾಕೃಷ್ಣ ತಂತ್ರಿ ಮಾತನಾಡಿ, ವಿದ್ಯಾರ್ಥಿಗಳ ರಚನೆಗಳು ವರ್ಷಾಂತ್ಯದಲ್ಲಿ ಮುದ್ರಣರೂಪಕ್ಕೆ ಬಂದು, ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಯಾಗಲಿ ಎಂದು ಶುಭ ಹಾರೈಸಿದರು.

ಅತ್ಯುತ್ಕೃಷ್ಟ ಸಾಹಿತ್ಯವನ್ನು ಕನ್ನಡನಾಡಿಗೆ ಬಿಟ್ಟು ಇತ್ತೀಚೆಗೆ ದಿವಂಗತರಾದ ಹಿರಿಯ ಸಾಹಿತಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಂಸ್ಮರಣೆಯ ಪ್ರಯುಕ್ತ ಆಯೋಜಿಸಲಾದ ಭಾವಗಾಯನ ಕಾರ್ಯಕ್ರಮವನ್ನು ಚಿನ್ಮಯಿ ವಿ.ಭಟ್ ಪ್ರಸ್ತುತಪಡಿಸಿದರು. ತಬಲಾದಲ್ಲಿ ಕೆ.ನರಸಿಂಹ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಗೌರವ್ ಡಿ.ಶೆಟ್ಟಿ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಹೇಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಹರ್ಷಿತಾ ವಂದಿಸಿದರು. ಪ್ರೌಢಶಾಲಾ ವಿಭಾಗದ ಅನಂತಪದ್ಮನಾಭ ರಾವ್, ಪ್ರತಿಭಾ ಪಡೀಲ್, ಉಪನ್ಯಾಸಕರಾದ ರವಿಚಂದ್ರ ಮಯ್ಯ, ಮೇದಪ್ಪ ಜಿ.ಆರ್, ಚಂದ್ರಶೇಖರ್, ಉಪನ್ಯಾಸಕಿಯರಾದ ಡಾ. ಸಂಧ್ಯಾರಾಣಿ, ಆಶಾ, ರಂಜನಿ, ಪ್ರತಿಮಾ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕ ರಾಧೇಶ ತೋಳ್ಪಾಡಿ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ನಾಡಪ್ರಭು ಕೆಂಪೇಗೌಡ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ತ್ರಿಶೂಲ್ ಮೊಯ್ಲಿ ಅವರನ್ನು ಗೌರವಿಸಲಾಯಿತು. ಕಾಲೇಜು ಮಟ್ಟದಲ್ಲಿ ನಡೆದ ಮಾದಕ ವ್ಯಸನಮುಕ್ತ ಸಮಾಜ ಕುರಿತು ಏರ್ಪಡಿಸಲಾದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


Be the first to comment on "BENJANAPADAVU: ಬೆಂಜನಪದವು: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಂಜೆ ಸಾಹಿತ್ಯ ಸಂಘ ಉದ್ಘಾಟನೆ"