ಭರ್ಜರಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕ ಜಂಕ್ಷನ್ ನಲ್ಲಿ ವಿಟ್ಲಕ್ಕೆ ತೆರಳುವ ರಸ್ತೆಯ ಆರಂಭದಲ್ಲೇ ಪ್ರಯಾಣಿಕರು ಬಸ್ಸುಗಳಿಗೆ ಕಾಯುತ್ತಾರೆ. ಇಲ್ಲಿ ಬಸ್ಸುಗಳಷ್ಟೇ ಅಲ್ಲ, ಟಂಟಂ ವಾಹನ, ಆಟೊರಿಕ್ಷಾಗಳೂ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಹೀಗಾಗಿ ರಸ್ತೆ ಪಕ್ಕದಲ್ಲೇ ಧೂಳು ನುಂಗಿಕೊಂಡು ನಿಲ್ಲಬೇಕಾಗಿರುವ ಅನಿವಾರ್ಯತೆ ಒಂದೆಡೆಯಾದರೆ, ಅಲ್ಲೇ ರೆಂಬೆ, ಕೊಂಬೆಗಳನ್ನು ಕಳೆದುಕೊಂಡ ಮರವೊಂದು ಇವತ್ತೋ, ನಾಳೆಯೋ ಬೀಳುವಂತಿದೆ.
ಈ ಕುರಿತು www.bantwalnews.com ಜೊತೆ ಅಳಲು ತೋಡಿಕೊಂಡ ಸ್ಥಳೀಯ ಪ್ರಯಾಣಿಕರು, ಈಗಿರುವ ಬಸ್ ಸ್ಟ್ಯಾಂಡ್ ಒಳಗೆ ಹೋಗಿ ನಿಲ್ಲಲು ಸಮಸ್ಯೆ ಇದೆ. ಬಸ್ ಬಂದರೆ, ರಸ್ತೆಯಲ್ಲಿ ನಿಲ್ಲುತ್ತದೆ. ಈ ಮರದ ಬಳಿಯೇ ಬಸ್, ಆಟೊಗಳು ನಿಲ್ಲುವ ಕಾರಣ ನಾವೂ ಅಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬಿದ್ದುಹೋಗುವ ಮರವನ್ನು ತೆರವುಗೊಳಿಸಿದರೆ, ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಬುಲ್ ಡೋಜರ್ ಗಳು ಎಲ್ಲೆಲ್ಲಿ ಓಡಾಡಲಿವೆ ಎಂಬ ಕುರಿತು ನಿಖರ ಮಾಹಿತಿ ಯಾರಿಗೂ ಇಲ್ಲ. ರಸ್ತೆ ವಿಸ್ತರಣೆ ಸಂದರ್ಭ, ಈ ಮರ ತೆರವಾಗಲಿದೆ ಎಂಬ ನಂಬಿಕೆಯಲ್ಲಿ ಪ್ರಯಾಣಿಕರು ಇದ್ದಾರೆ. ಇಲ್ಲಿ ಶಾಲೆ, ಕಾಲೇಜುಗಳಿಗೆ ತೆರಳುವ ಮಕ್ಕಳೂ ನಿಲ್ಲುತ್ತಾರೆ, ಕೆಲವೊಮ್ಮೆ ಬಸ್ಸುಗಳು ಬರುವುದು ತಡವಾದರೆ, ನಿಲ್ಲಲು ಬೇರೆ ಜಾಗವೂ ಇರುವುದಿಲ್ಲ. ಹೀಗಾಗಿ ಒಣಗಿದ ಮರ ದೊಡ್ಡ ದುರಂತಕ್ಕೆ ಅನುವು ಮಾಡಿಕೊಡುವ ಬದಲು ಶೀಘ್ರ ಅದನ್ನು ತೆರವುಗೊಳಿಸುವುದು ಒಳ್ಳೆಯದು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
Be the first to comment on "ಅಪಾಯಕಾರಿಯಾಗಿದೆ ಕಲ್ಲಡ್ಕ ಬಸ್ ನಿಲ್ದಾಣದಲ್ಲಿರುವ ಒಣಗಿದ ಮರ"