ವಿವಿಧ ಮೂಲಗಳಿಂದ ಸಂಗ್ರಹವಾಗುವ ತೆರಿಗೆ ಹಣದಲ್ಲಿ ರಾಜ್ಯಗಳನ್ನು ಸಬಲೀಕರಣಗೊಳಿಸಲು ಸಮರ್ಪಕವಾಗಿ, ನ್ಯಾಯಯುತವಾಗಿ ಹಂಚಿಕೆ ಮಾಡಬೇಕಾಗಿರುವುದು ಕೇಂದ್ರ ಸರಕಾರದ ಹೊಣೆ. ಜಿಎಸ್ ಟಿ, ತೆರಿಗೆ ಹಣ, ಅನುದಾನಗಳ ಹಂಚಿಕೆಯಲ್ಲಿ ಎನ್ ಡಿ ಎ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಆಡಳಿತ ಸೌಧ ಮುಂಭಾಗ ಸಿಪಿಐ ಪ್ರತಿಭಟನೆಯನ್ನು ಮಂಗಳವಾರ ನಡೆಸಿತು.
ನಾಲ್ಕು ವರ್ಷಗಳಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಕಡಿತಗೊಳಿಸಿ ಸುಮಾರು 45 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಎಸರಿಗುವ ಅನ್ಯಾಯವನ್ನು ಪ್ರಶ್ನಿಸುವಂತೆ ಒತ್ತಾಯಿಸಿ ಹಾಗೂ ರಾಜ್ಯದ ಪಾಲಿನ ತೆರಿಗೆ ಹಣ ಸೇರಿದಂತೆ ನೆಲ, ಜಲ, ಭಾಷೆಯಂತಹ ಅಸ್ಮಿತೆಯ ಪ್ರಶೆಗಳು ಎದುರಾದಾಗ ರಾಜ್ಯದ ಪರ ಧ್ವನಿ ಎತ್ತದೆ ಸಂಸದರೂ ಮೌನ ತಾಳಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಹಿಂದಿನ ಅವಧಿಯಲ್ಲಿ ಬಿ.ಜೆಪಿ ಸರಕಾರ ಜ್ಯಾರಿಗೆ ತಂದಿದ್ದ ರೈತವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಇಂದಿನ ಸರಕಾರ ಹಿಂಪಡೆಯದೇ ಅದನ್ನೇ ಮುಂದುವರಿಸುವ ಮೂಲಕ ತಾವೂ ಕೂಡಾ ರೈತ ಕಾರ್ಮಿಕ ವಿರೋಧಿಗಳು ಎಂದು ಬಹಿರಂಗ ಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರಾಜ್ಯ ಸರಕಾರ ಕೂಡಾ ಚುನಾವಣಾ ಪೂರ್ವದಲ್ಲಿ ಸ್ಕೀಂ ಕಾರ್ಮಿಕರಿಗೆ ಘೋಷಿಸಿದ್ದ 6 ನೇ ಗ್ಯಾರಂಟಿಯನ್ನು 2024-25 ಸಾಲಿನ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಡದೇ ಕೊಟ್ಟ ಮಾತಿಗೆ ತಪ್ಪಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ, ಆಶಾ, ಬಿಸಿಯೂಟ, ಕಟ್ಟಡ, ಕಾರ್ಮಿಕರ ಬೇಡಿಕೆಗಳನ್ನು ಅತೀ ಶೀಘ್ರವಾಗಿ ಇತ್ಯರ್ಥಗೊಳಿಸಲು ಆಗ್ರಹಿಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ ಮಾತನಾಡಿದರು. ಪಕ್ಷದ ಬಿಸಿರೋಡು ಕಚೇರಿಯಿಂದ ಮೆರವಣಿಗೆ ನಡೆಯಿತು. ನೇತೃತ್ವವನ್ನು ಪಕ್ಷದ ಬಂಟ್ವಾಳ ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ರಾಮ ಮುಗೇರ ವಿಟ್ಲ, ಶ್ರೀನಿವಾಸ ಭಂಡಾರಿ, ಓ ಕೃಷ್ಣ, ಭೋಜ ಕರಂಬೇರ, ಹರ್ಷಿತ್ ಬಂಟ್ವಾಳ, ಶಮಿತಾ, ಕುಸುಮಾ ಕಳ್ಳಿಗೆ, ಕೇಶವತಿ, ಮಮತಾ, ರತಿ ಎಸ್ ಭಂಡಾರಿ, ಮೋಹಿನಿ, ಕಮಲಾಕ್ಷ ಭಂಡಾರಿ, ಮುಂತಾದವರು ವಹಿಸಿದ್ದರು. ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ಪ್ರೇಮನಾಥ ಕೆ ವಂದಿಸಿದರು.
Be the first to comment on "ಭಾರತದ ಒಕ್ಕೂಟ ವ್ಯವಸ್ಥೆ ಉಳಿಸಲು ಒತ್ತಾಯಿಸಿ ಬಂಟ್ವಾಳದಲ್ಲಿ ಸಿಪಿಐ ಪ್ರತಿಭಟನೆ"