ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಪಿಡಿಒಗಳು, ಗ್ರಾಪಂ ಅಧ್ಯಕ್ಷರು ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯೊಂದನ್ನು ಸೋಮವಾರ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಅವರು ಮುಂಬರುವ ಮಳೆಗಾಲ ಸಂದರ್ಭ ಸಂಭಾವ್ಯ ಅಪಾಯಗಳನ್ನು ಎದುರಿಸಲು ಸನ್ನದ್ಧರಾಗಿದ್ದು, ಪೂರ್ವತಯಾರಿಯನ್ನು ನಡೆಸಬೇಕು. ಮಳೆ ಬರುವವರೆಗೆ ಕುಡಿಯುವ ನೀರಿನ ಸಮಸ್ಯೆಗಳೂ ತಲೆದೋರದಂತೆ ನೋಡಿಕೊಳ್ಳಬೇಕು. ದೂರವಾಣಿ ಸ್ವಿಚ್ ಆಫ್ ಮಾಡದೆ, ಸದಾ ಜನರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದರು.
ಬಿ.ಸಿ.ರೋಡಿನ ತಾಲೂಕು ಪಂಚಾಯಿತಿಯ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕರು ಹಾರಿಕೆಯ ಉತ್ತರ ನೀಡಿದ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೇಲಧಿಕಾರಿಗಳ ಜೊತೆ ಮಾತನಾಡಿದರು.
ತಹಸೀಲ್ದಾರ್ ಎಸ್.ಬಿ.ಕೂಡಲಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರೊಂದಿಗೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ ಶಾಸಕರು, ಮಳೆಗಾಲಕ್ಕೂ ಮುನ್ನ ದುರಸ್ತಿಗೊಳಿಸಬೇಕಾದ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳು, ಅಪಾಯದ ಸ್ಥಿತಿಯಲ್ಲಿರುವ ಗುಡ್ಡಗಳು, ಹೆದ್ದಾರಿ, ಹೂಳೆತ್ತದ ಚರಂಡಿ, ಸಮಸ್ಯೆ ಉಂಟಾಗುವ ಸನ್ನಿವೇಶಗಳನ್ನು ನಿಭಾಯಿಸುವ ಕುರಿತು ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಮ: ಮಳೆ ಬರುವವರೆಗೂ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ, ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಿ ಎಂದ ಶಾಸಕರು, ಪುಚ್ಚೇರಿ ಡ್ಯಾಂ ನಲ್ಲಿ ನೀರು ಖಾಲಿ ಮಾಡಿ ಸಂಗಬೆಟ್ಟು ಸಹಿತ ಸುತ್ತಮುತ್ತಲಿನ ಜನರ ಕುಡಿಯುವ ನೀರಿಗೆ ತೊಂದರೆ ಉಂಟುಮಾಡಿದವರು ಯಾರು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕುಡಿಯುವ ನೀರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಎಂದು ಹೇಳಿದ ಶಾಸಕರು, ಯಾವುದೇ ಹಂತದಲ್ಲೂ ಸಮಸ್ಯೆ ಉದ್ಭವವಾಗಬಾರದು ಎಂದರು.
ಸಜಿಪ ಏತ ನೀರಾವರಿ ಯೋಜನೆಗೆ ಮೆಸ್ಕಾಂನಿಂದ ನೀರು ಪೂರೈಕೆ ನಿಲ್ಲಿಸಲಾಗಿದೆ ಎಂಬ ದೂರಿನ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಎಂ.ಡಿ. ಅವರ ಜೊತೆ ಶಾಸಕರು ಮಾತನಾಡಿ ಸೂಚನೆ ನೀಡಿದರು.
ಈ ಸಂದರ್ಭ ವಿವರ ನೀಡಿದ ಬಿಇಒ ಮತ್ತು ಸಿಡಿಪಿಒಗಳು, 40 ಅಂಗನವಾಡಿ ಕೇಂದ್ರಗಳು ಮತ್ತು 64 ಶಾಲೆಗಳಲ್ಲಿ ಈಗಿದ್ದ ಸ್ಥಿತಿ ಮುಂದುವರಿದರೆ, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಬಹುದು ಎಂಬ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಅಂಗನವಾಡಿ ಶಾಲೆಗಳನ್ನು ಪುನಾರಂಭಗೊಳ್ಳುವುದನ್ನು ಮುಂದಕ್ಕೆ ಹಾಕಬಹುದೇ ಎಂಬ ಕುರಿತು ಮಾತನಾಡುವುದಾಗಿ ತಿಳಿಸಿದರು.
ಕ್ರಮ ಕೈಗೊಳ್ಳಿ: ಇದೇ ಸಂದರ್ಭ, ಕೆಆರ್ ಡಿಎಲ್ ನವರು 22 ಶಾಲೆಗಳಲ್ಲಿ ಮಳೆ ಹಾನಿ ಕೆಲಸ ಮಾಡಿಲ್ಲ ಎಂದು ಬಿಇಒ ಹೇಳಿದರೆ, 12 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಇವುಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಶಾಸಕರು ಸೂಚನೆ ನೀಡಿದರು. ಉಪ್ಪುಗುಡ್ಡೆ ನೀರಿನ ಟ್ಯಾಂಕ್ ಮತ್ತೆ ಮಳೆಗಾಲದಲ್ಲಿ ಬೀಳುವ ಸಾಧ್ಯತೆಯನ್ನು ವಿಎ ಗಮನಕ್ಕೆ ತಂದರು. ಪಾಣೆಮಂಗಳೂರು ಮಿಲಿಟರಿ ಗ್ರೌಂಡ್ ಹಾಗೂ ಇಲ್ಲಿನ ತಗ್ಗು ಪ್ರದೇಶಗಳಲ್ಲಿ ನೆರೆ ಪ್ರತಿ ವರ್ಷವೂ ಬರುತ್ತದೆ, ಆದರೆ ಇಲ್ಲಿರುವ ಸಣ್ಣ ತೋಡುಗಳ ಬದಿಯಲ್ಲಿರುವ ಗಿಡಗಂಟಿಗಳು, ಪೊದೆಗಳನ್ನು ಕಡಿದು ಬಳಿಕ ಹೂಳೆತ್ತುವ ಕಾರ್ಯವನ್ನು ಪುರಸಭಾ ಇಲಾಖೆಯವರು ಮಾಡಬೇಕು ಎಂದು ಶಾಸಕರು ಸೂಚಿಸಿದರು.ಈ ಸಂದರ್ಭ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಗಮನಕ್ಕೆ ತಂದರು. ಗ್ರಾಮೀಣ ಭಾಗದಲ್ಲಿ ರಸ್ತೆ ಬದಿಯಲ್ಲಿ ರಸ್ತೆ ಕೆಟ್ಟು ಹೋಗುವ ರೀತಿಯಲ್ಲಿ ಅಗೆದು ಕೇಬಲ್ ವಯರ್ ಗಳನ್ನು ಹಾಕಲಾಗುತ್ತಿದೆ ಎಂದರು.
Be the first to comment on "ಮುಂಗಾರು ಮುನ್ನೆಚ್ಚರಿಕೆ: ಸದಾ ಅಲರ್ಟ್ ಆಗಿರಿ, ಫೋನ್ ಸ್ವಿಚ್ ಆಫ್ ಮಾಡದಿರಿ: ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ"