ಬಂಟ್ವಾಳ: 2023ನೇ ಇಸವಿಯಲ್ಲಿ ಬಂಟ್ವಾಳದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಸಂದರ್ಭ ಕ್ಷೇತ್ರಕ್ಕೆ ದೇವಾಡಿಗ ಸಮಾಜದಿಂದ ನೂತನ ಶ್ರೀ ರಥ ಸಮರ್ಪಣೆಯಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ಬೆಳಗ್ಗೆ ಕೆತ್ತನೆ ಮುಹೂರ್ತ ಕಾರ್ಯಕ್ರಮ ನಡೆಯಿತು.
ರಾಮದಾಸ್ ಬಂಟ್ವಾಳ ಅಧ್ಯಕ್ಷತೆಯಲ್ಲಿ ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ರಚನೆಯಾಗಿದ್ದು, ರಥ ಸಮರ್ಪಣಾ ಸಮಿತಿಯ ಪದಾಧಿಕಾರಿಗಳು, ಸಮಸ್ತ ದೇವಾಡಿಗ ಬಂಧುಗಳು ಹಾಗೂ ಆಸ್ತಿಕ ಬಂಧುಗಳ ಸಹಕಾರದೊಂದಿಗೆ ಶ್ರೀ ರಥ ಸಮರ್ಪಣೆಗೆ ಮುಂದಡಿ ಇಡಲಾಗಿದೆ. ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ದೇವರಿಗೆ ವಿಶೇಷ ಪೂಜೆ ಸಮರ್ಪಿಸಿ ದೇವಸ್ಥಾನದ ನಂದಾದೀಪ ಸಭಾಂಗಣದಲ್ಲಿ ದೀಪಪ್ರಜ್ವಲನೆಯ ಮೂಲಕ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್ ಹಾಗೂ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಮಹೇಶ್ ಭಟ್ ನೇತೃತ್ವದಲ್ಲಿ ರಥ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಲಾಯಿತು. ರಥ ಶಿಲ್ಪಿ ಪೊಳಲಿ ಗಣೇಶ ಆಚಾರ್ಯ ಮತ್ತು ಅವರ ತಂಡಕ್ಕೆ ಸಮಿತಿಯ ಅಧ್ಯಕ್ಷರಾದ ರಾಮದಾಸ್ ಬಂಟ್ವಾಳ ಅವರು ವೀಳ್ಯ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ದೇವಾಡಿಗ ಸಮಾಜದ ವತಿಯಿಂದ ಶ್ರೀ ನಂದಾವರ ದೇವಸ್ಥಾನಕ್ಕೆ ಅರ್ಪಿಸುವ ನೂತನ ರಥವು ಸಮಾಜದ ಬಲಿಷ್ಠ ಸಂಘಟನೆಗೆ ಅಡಿಗಲ್ಲಾಗಲಿ ಎಂದು ಶುಭ ಹಾರೈಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ನಂದಾವರ ಕ್ಷೇತ್ರಕ್ಕೆ ಬಹುನಿರೀಕ್ಷಿತ ರಸ್ತೆ ನಿರ್ಮಾಣಕ್ಕೆ ಚೌತಿ ದಿನ ಮುಹೂರ್ತ ನಡೆಯಲಿದ್ದು, ಅಭಿವೃದ್ಧಿಗೆ ಸರ್ವ ನೆರವು ನೀಡುವುದಾಗಿ ತಿಳಿಸಿ, ದೇವಾಡಿಗ ಸಮಾಜಕ್ಕೆ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಸದೃಢತೆಯನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಾಡಿಗ ಸಮಾಜವು ಸಂಖ್ಯೆಯಲ್ಲಿ ಸಣ್ಣದಾದರೂ ಧಾರ್ಮಿಕ ವಿಚಾರಗಳಲ್ಲಿ, ಸಾಂಸ್ಕೃತಿಕ ವಿಚಾರಗಳಲ್ಲಿ ಅತ್ಯಂತ ಶ್ರೀಮಂತವಾಗಿದೆ ಎಂದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ದ.ಕ.ಜಿ.ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಮಿತಿಯ ಗೌರವಾಧ್ಯಕ್ಷರಾದ ಡಾ. ಸುಂದರ ಮೊಲಿ, ಗೌರವ ಸಲಹೆಗಾರರಾದ ಪದ್ಮನಾಭ ದೇವಾಡಿಗ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಶಿರಾಜ್ ರಾವ್ ನೂಯಿ, ಉಪಾಧ್ಯಕ್ಷರಾದ ರಾಮ್‌ಪ್ರಸಾದ್ ಪೂಂಜಾ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಉಪಸ್ಥಿತರಿದ್ದರು. ಡಾ| ಸುಂದರ ಮೊಯ್ಲಿ ಅವರು ಸಂಘಟನೆಯ ವಿಷಯ ಮಂಡನೆ ಮಾಡಿದರು. ವಿಜಯಾ ಪ್ರಕಾಶ್ ಪ್ರಾರ್ಥಿಸಿದರು. ಸುಧೀರ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ನೆಟ್ಲ ವಂದಿಸಿದರು. ಪ್ರಮುಖರಾದ ವಿಶ್ವನಾಥ ಆಳ್ವ, ಅರುಣ್ ಕುಮಾರ್, ದಾಮೋದರ್ ಬಿ.ಎಂ., ಮೋಹನದಾಸ ಹೆಗ್ಡೆ, ದೇವಪ್ಪ ನಾಯ್ಕ, ಜಯ ಅಶೋಕ ಗಟ್ಟಿ, ಜಯಶಂಕರ ಬಾಸ್ರಿತ್ತಾಯ, ಮುಳ್ಳುಂಜ ವೆಂಕಟೇಶ್ವರ ಭಟ್, ರಥ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯ್ಲಿ, ಬೆಂಜನಪದವು, ಪದಾಧಿಕಾರಿಗಳಾದ ಪ್ರವೀಣ್ ತುಂಬೆ, ಸಂತೋಷ್ ದೇವಾಡಿಗ, ಮುರಳಿ ದೇವಾಡಿಗ, ರಾಜು ಮೊಯ್ಲಿ, ಚಂದ್ರಾವತಿ ದೇವಾಡಿಗ ಪೊಳಲಿ, ಗಣೇಶ್ ದೇವಾಡಿಗ ಮಂಡಾಡಿ, ರಕ್ಷಿತ್ ಕೆಂಬಾರ್, ಸುನೀತ ಸುರೇಶ್, ಯಶವಂತ್ ವಿಟ್ಲ, ಪ್ರಮೀಳ ದೇವಾಡಿಗ ಮತ್ತಿತರರು ಹಾಜರಿದ್ದರು.
Be the first to comment on "ನಂದಾವರ ದೇವಸ್ಥಾನಕ್ಕೆ ದೇವಾಡಿಗ ಸಮಾಜದಿಂದ ಬ್ರಹ್ಮಕಲಶೋತ್ಸವ ಸಂದರ್ಭ ಸಮರ್ಪಿಸುವ ರಥ ನಿರ್ಮಾಣ ಮುಹೂರ್ತ ಕಾರ್ಯಕ್ರಮ"