ಸಿದ್ದಕಟ್ಟೆ: ಸಿದ್ಧಕಟ್ಟೆಯ ಸೈಂಟ್ ಪ್ಯಾಟ್ರಿಕ್ ಚರ್ಚ್ ಹಾಲ್ ನಲ್ಲಿ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು, ರೋಟರಿ ಸಂಸ್ಥೆಯು ಶಿಕ್ಷಣ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆ, ಸರ್ವೋದಯದ ಕಲ್ಪನೆಯೊಂದಿಗೆ ತನ್ನ ಸೇವಾ ಕಾರ್ಯವನ್ನು ಮಾಡುತ್ತಿದೆ ಎಂದು ಸಹಾಯಕ ಗವರ್ನರ್ ಸುರೇಂದ್ರ ಕಿಣಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ಲಬ್ ನಲ್ಲಿರುವ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಭಿನಂದಿಸಲಾಯಿತು. ಬಂಟ್ವಾಳ ತಾಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುನಿಲ್ ಸಿಕ್ವೇರಾ ಇವರನ್ನು ಸನ್ಮಾನಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ರಮೇಶ ನಾಯಕ್ ರಾಯಿ ಹಾಗೂ ಸ್ಕಾಲರ್ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧರಾಗಿರುವ ನಾರಾಯಣ ನಾಯಕ್ ಕರ್ಪೆ ಇವರನ್ನು ಗೌರವಿಸಲಾಯಿತು. ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೋಟರಿಯಿಂದ ನೂತನವಾಗಿ ಆರಂಭಿಸುತ್ತಿರುವ ಟೈಲರಿಂಗ್ ಹಾಗೂ ಫ್ಯಾಶನ್ ಡಿಸೈನಿಂಗ್ ಕ್ಲಾಸನ್ನು ಉದ್ಘಾಟಿಸಲಾಯಿತು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಗಳಿಗೆ ವೈದ್ಯಕೀಯ ಸಹಾಯಧನವನ್ನು ವಿತರಿಸಲಾಯಿತು. ವಲಯ ಕಾರ್ಯದರ್ಶಿ ಜಯರಾಮ ರೈ, ಕ್ಲಬ್ ಅಡ್ವೈಸರ್ ಜೆರಾಲ್ಡ್ ಡಿಕೋಸ್ತ ಹಾಗೂ ವಿಶೇಷ ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಅಧ್ಯಕ್ಷರಾದ ಮೈಕಲ್ ಡಿಕೋಸ್ತ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ವತಿಯಿಂದ ಶಿಕ್ಷಕರ ದಿನಾಚರಣೆ, ಪ್ರತಿಭಾನ್ವಿತರಿಗೆ ಅಭಿನಂದನೆ"