ಬಂಟ್ವಾಳ: ಬೀದಿದೀಪ, ಜನನ, ಮರಣ ನೋಂದಣಿಯ ಸರ್ ನೇಮ್ ಗೊಂದಲ, ಪಂಪ್ ಆಪರೇಟರ್ ಸಮಸ್ಯೆ ಹಾಗೂ ಕೋವಿಡ್ ನಿರ್ವಹಣೆಯ ಕುರಿತು ಗುರುವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2.55 ಕೋಟಿ ರೂ ಕ್ರಿಯಾಯೋಜನೆ ಮಂಡನೆ, ಮಕ್ಕಳ ಮನೆ ಮನೆ ಸಮೀಕ್ಷೆ ನೋಂದಣಿ ಹಾಗೂ ಕೋವಿಡ್ ಕುರಿತ ನಿರ್ವಹಣೆ ವಿಚಾರವಾಗಿ ವಿಷಯಸೂಚಿ ಇತ್ತು. 2021-22ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನ 2.55 ಕೋಟಿ ರೂನಲ್ಲಿ 1.02 ಕೋಟಿ ರೂಗೆ ಕ್ರಿಯಾಯೋಜನೆಗೆ ಮೀಸಲಿಡಬೇಕು ಎಂದು ಅಧ್ಯಕ್ಷರು ಕೋರಿ, ಉಳಿದ ಮೊತ್ತವನ್ನು ಘನತ್ಯಾಜ್ಯ ಮತ್ತು ಕುಡಿಯುವ ನೀರಿಗೆ ಮೀಸಲಿಡುವ ಕುರಿತು ನಿರ್ಣಯ ಮಂಡಿಸಲಾಯಿತು. ಈ ಸಂದರ್ಭ ಜನನ, ಮರಣ ನೋಂದಣಿ ವಿಚಾರವಾಗಿ ಪ್ರಸ್ತಾಪಿಸಿದ ಸದಸ್ಯ ಗಂಗಾಧರ ಪೂಜಾರಿ, ಕಾನೂನಿನ ತೊಡಕನನ್ನು ಆರೋಗ್ಯ ನಿರೀಕ್ಷಕರು ಹೇಳುತ್ತಿದ್ದು, ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು. ಸದಸ್ಯ ಗೋವಿಂದ ಪ್ರಭು ಇದಕ್ಕೆ ದನಿಗೂಡಿಸಿದರು. ಸದಸ್ಯರಾದ ಲುಕ್ಮಾನ್, ಪಿ.ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಮುನೀಶ್ ಆಲಿ, ಸಿದ್ದೀಕ್ ಗುಡ್ಡೆಯಂಗಡಿ ಮಾತನಾಡಿದರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ಈ ಸಂದರ್ಭ ಸಲಹೆ ನೀಡಿದರು. ಇದೇ ಸಂದರ್ಭ ತ್ಯಾಜ್ಯವಿಲೇವಾರಿ ಆಗದೇ ಇರುವುದು, ಪಂಪ್ ಆಪರೇಟರ್, ಬೀದಿದೀಪ ವ್ಯವಸ್ಥೆ, ಗ್ಯಾಸ್ ಪೈಲ್ ಲೈನ್ ಕುರಿತು ಸರ್ವೆ, ಕಂಚಿನಡ್ಕಪದವು ವಿಚಾರ, ಅನುದಾನ ಹಂಚಿಕೆ ಸಹಿತ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಸದಸ್ಯರಾದ ಹರಿಪ್ರಸಾದ್, ಮಹಮ್ಮದ್ ನಂದರಬೆಟ್ಟು, ದೇವಕಿ, ಜೀನತ್ ಫಿರೋಜ್, ಗಾಯತ್ರಿ ಪ್ರಕಾಶ್, ಮಹಮ್ಮದ್ ಇದ್ರೀಸ್ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮ್ಯಾನೇಜರ್ ಲೀಲಾವತಿ ಉಪಸ್ಥಿತರಿದ್ದರು. ಇಂಜಿನಿಯರುಗಳಾದ ಡೊಮಿನಿಕ್ ಡಿಮೆಲ್ಲೊ, ಆರೋಗ್ಯ ಪ್ರಭಾರ ನಿರೀಕ್ಷಕ ಜಯಶಂಕರ್ ಪ್ರಸಾದ್, ಹಾಗೂ ಕೋವಿಡ್ ನಿರ್ವಹಣೆ ಕುರಿತು ಕಿರಿಯ ಇಂಜಿನಿಯರ್ ಸಹಾಯಕ ಇಕ್ಬಾಲ್ ಪರ್ಲಿಯಾ ಮಾತನಾಡಿದರು. ಸಿಬ್ಬಂದಿ ರಜಾಕ್ ವಿಷಯಸೂಚಿ ಮಂಡಿಸಿದರು.
Be the first to comment on "ಬೀದಿದೀಪ, ತ್ಯಾಜ್ಯ, ಕೋವಿಡ್ ಸಹಿತ ವಿವಿಧ ವಿಷಯಗಳ ನಿರ್ವಹಣೆ ಕುರಿತು ಬಂಟ್ವಾಳ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ"