ಬಂಟ್ವಾಳ

ಮತ್ತೆ ಆತಂಕ ಸೃಷ್ಟಿಸಿದ ಗ್ಯಾಸ್ ಟ್ಯಾಂಕರ್: ಸೂರಿಕುಮೇರಿಯಲ್ಲಿ ಪಲ್ಟಿ – ಹೆದ್ದಾರಿ ಸಂಚಾರ ಬ್ಲಾಕ್, ತೆರವು ಕಾರ್ಯ ಪ್ರಗತಿಯಲ್ಲಿ

ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಮಂಗಳವಾರ ಬೆಳಗ್ಗೆ ಸುಮಾರು 3ರಿಂದ 4 ಗಂಟೆ ಮಧ್ಯೆ ಗ್ಯಾಸ್ ಟ್ಯಾಂಕರ್ ಒಂದು ರಸ್ತೆ ಮಧ್ಯಕ್ಕೇ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಘಟನೆಯಲ್ಲಿ ಗ್ಯಾಸ್ ಲೀಕ್ ಆಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೂ ಮುಂಜಾಗರೂಕತಾ ಕ್ರಮವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಈಗಾಗಲೇ ತಾಂತ್ರಿಕ ತಂಡ ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ಸುರಕ್ಷಿತವಾಗಿ ಟ್ಯಾಂಕರ್ ಅನ್ನು ಲಿಫ್ಟ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ವಿಟ್ಲ ಪೊಲೀಸ್ ಎಸ್.ಐ. ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ. ಮತ್ತು ವಿಟ್ಲ, ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಬದಲಿ ರಸ್ತೆಯ ಸೂಚನೆಗಳನ್ನು ನೀಡುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕ ಭಾಗದಲ್ಲಿ ಎಲ್ಲಾ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನವನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹಾಗೂ ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.

ವಿವಿಧ ಭಾಗದಲ್ಲಿ ಬುಡೋಳಿ ಯೂತ್ ಫೆಡರೇಶನ್,ಸೂರಿಕುಮೇರು ಬದ್ರಿಯಾ ಯಂಗ್ ಮೆನ್ಸ್  ಸದಸ್ಯರು, ಸಾರ್ವಜನಿಕರು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಅನಿಲ ಸೋರಿಕೆಯಾಗದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನೂ ಮಸೀದಿ ಧ್ವನಿ ವರ್ಧಕದ ಮೂಲಕ ಸುತ್ತಮುತ್ತಲಿನ ಭಾಗದ ಮನೆಗಳಲ್ಲಿ ಬೆಂಕಿ ಬಳಸದಂತೆ ಸೂಚನೆ ನೀಡಲಾಗಿದೆ.

ಜಾಹೀರಾತು

ಹಿಂದೆಯೂ ಆಗಿತ್ತು: ಪೆರ್ನೆಯಲ್ಲಿ ಕೆಲ ವರ್ಷಗಳ ಹಿಂದೆ ಅನಿಲ ಟ್ಯಾಂಕರ್ ಅಪಘಾತದಲ್ಲಿ ಜೀವಹಾನಿ ಸಂಭವಿಸಿದ್ದರೆ, 2016ರಲದ್ಲಿ ಸೂರಿಕುಮೇರುವಿನಲ್ಲಿ ಟ್ಯಾಂಕರ್ ಮಗುಚಿ ದಿನವಿಡೀ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳೀಯರು ಭೀತರಾಗಿದ್ದರು.

ಸ್ಥಳೀಯರ ಆತಂಕ, ಸೂಚನೆ ಪಾಲನೆ ಆಗ್ತಾ ಇಲ್ಲ ಹೆದ್ದಾರಿ ಅಪಘಾತ ಸಂಭವಿಸಿದ ವೇಳೆ ಅಂದಿನ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಗ್ಯಾಸ್ ಟ್ಯಾಂಕರ್ ರಾತ್ರಿ ಸಾಗುವ ವಿಚಾರದ ಕುರಿತು ಸೂಚನೆಗಳನ್ನು ಹೊರಡಿಸಿದ್ದರು. ಆದರೆ ನಿರಾತಂಕವಾಗಿ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಭಾರಿ ಗಾತ್ರದ ಅನಿಲ ಟ್ಯಾಂಕರುಗಳು ಸಾಗುತ್ತಿದ್ದು, ಸಮೀಪದ ಮನೆಯವರಿಗೆ ನಿತ್ಯ ಆತಂಕಕ್ಕೆ ಕಾರಣವಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.