ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪಶು ಸಂಗೋಪನೆ, ಹಜ್ ಮತ್ತು ವಕ್ಪ್ ಸಚಿವರಾದ ಪ್ರಭು.ಬಿ ಚವ್ಹಾನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮಾತನಾಡಿದರು.
ಗೋಹತ್ಯೆ ಕಾಯ್ದೆಯನ್ನು ಉಲ್ಲಂಘಿಸಿದ್ದಲ್ಲಿ ಅಂತವರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆ ಉಲ್ಲಂಘಿಸಿದವರಿಗೆ ಮೂರು ವರ್ಷದಿಂದ ಆರು ವರ್ಷ ದವರೆಗೆ ಜೈಲು ಶಿಕ್ಷೆ, ಮೊದಲನೇ ಅಪರಾಧಕ್ಕೆ 50 ಸಾವಿರದಿಂದ 5 ಲಕ್ಷದವರೆಗೆ ಹಾಗೂ ಎರಡನೇ ಸಲ ಮಾಡಿದ ಅಪರಾಧಕ್ಕೆ ಒಂದು ಲಕ್ಷದಿಂದ 10 ಲಕ್ಷದ ವೆರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಜಾನುವಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣೆ ಮಾಡುವಾಗ ಪಶು ವೈದ್ಯರಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು, ಸಾಗಾಣಿಕಾ ವಾಹನದಲ್ಲಿ 5-6 ದನಗಳಿಗೆ ಮಾತ್ರ ಅವಕಾಶವಿರುತ್ತದೆ. ಅಲ್ಲದೇ ಜಾನುವಾರುಗಳಿಗೆ ಅಗತ್ಯವಿರುವ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ವಾಹನದಲ್ಲಿ ಇರಬೇಕು ಎಂದರು.
ಗರ್ಭಧಾರಿತ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಅವಕಾಶ ನೀಡಬಾರದು. ಜಾನುವಾರುಗಳ ಸಾಗಾಣಿಕೆಯನ್ನು ಮಾಡಲು ರಾತ್ರಿ 8 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಬೇಸಿಗೆಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೂ ಸಹ ಸಾಗಾಣಿಕೆಯನ್ನು ನಿರ್ಭಂಧಿಸಲಾಗಿದೆ ಎಂದರು. ಕಾಯ್ದೆ ವ್ಯಾಪ್ತಿಯಲ್ಲಿ ಹಸು, ಕರು ಮತ್ತು ಹೋರಿಗಳು ಸೇರಿವೆ. 13 ವರ್ಷದೊಳಗಿನ ಎಮ್ಮೆ ಹಾಗೂ ಕೋಣಗಳನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಪಶು ಚಿಕಿತ್ಸಾ ಕೇಂದ್ರಗಳ ವೈದ್ಯರು ಸಿಬ್ಬಂಧಿಗಳು ಕೆಲಸದ ವೇಳೆ ತಪ್ಪದೇ ಇರಬೇಕು. ಈ ಬಗ್ಗೆ ದೂರುಗಳು ಕೇಳಿಬರುತ್ತಿವೆ ಎಂದ ಅವರು, ಮೇಲಾಧಿಕಾರಿಗಳು ಆಗಿಂದಾಗ್ಗೆ ಗ್ರಾಮೀಣ ಭಾಗದಲ್ಲಿ ಭೇಟಿ ನೀಡಬೇಕು ಎಂದರು.
ಈಗಾಗಲೇ ನಮ್ಮ ನೆರೆ ರಾಜ್ಯಗಳಲ್ಲಿ ಹಕ್ಕಿಜ್ವರದ ರೋಗ ಕಂಡುಬಂದಿದೆ. ಜಿಲ್ಲೆಯಲ್ಲೂ ಹಕ್ಕಿ ಜ್ವರದ ನಿಯಂತ್ರಣದ ಬಗ್ಗೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಶಾಸಕರಾದ ಭರತ್ ವೈ.ಶೆಟ್ಟಿ ಮತ್ತು ವೇದವ್ಯಾಸ್ ಕಾಮತ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.
Be the first to comment on "ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಕಟ್ಟುನಿಟ್ಟು ಜಾರಿ: ಸಚಿವ ಪ್ರಭು.ಬಿ ಚವ್ಹಾನ್"