‘ತೇಪೆ’ ಹಾಕುವುದಷ್ಟೇ ಅಲ್ಲ, ಸಮಸ್ಯೆಯ ಮೂಲ ಹುಡುಕಿ ಎನ್ನುತ್ತಾರೆ ಬಳಕೆದಾರರು
ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್
ಕಳೆದ ವರ್ಷದ ಸೆಪ್ಟೆಂಬರ್, ಅಕ್ಟೋಬರ್ ವೃತ್ತಪತ್ರಿಕೆಗಳು, ಸುದ್ದಿ ಮಾಧ್ಯಮಗಳ ಲಿಂಕ್ ಗಳನ್ನು ಹುಡುಕಿದರೆ ನಿಮಗೆ ಸಿಗುವ ಹೆಡ್ಲೈನ್ ಗಳು ಇವು. ಹೆದ್ದಾರಿ ಹೊಂಡ ಮಳೆಗಾಲ ಮುಗಿದ ಕೂಡಲೇ ದುರಸ್ತಿಗೆ….ಸೂಚನೆ, ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನಪ್ರತಿನಿಧಿಗಳು.. ಇಂಥದ್ದು ಶಾಶ್ವತವಾಗಿ ಪ್ರಕಟವಾಗದೇ ಇರಲಿ ಎಂಬುದೇ ಜನರ ಮನದಾಳದ ಆಸೆ. ಏಕೆಂದರೆ…
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಅದೇ ಜಾಗದಲ್ಲಿ ಹೊಂಡಗಳು ಯಾಕೆ ಉದ್ಭವವಾಗುತ್ತಿವೆ ಎಂಬುದಕ್ಕೆ ವೈಜ್ಞಾನಿಕ ಕಾರಣ ಹುಡುಕಿ ಶಾಶ್ವತ ಪರಿಹಾರವನ್ನು ಸಿವಿಲ್ ಇಂಜಿನಿಯರಿಂಗ್ ತಜ್ಞರ ಮೂಲಕ ಮಾಡಿಸಿ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಸಾರ್ವಜನಿಕರು ಮತ್ತು ರಸ್ತೆ ಬಳಕೆದಾರರು ಒತ್ತಾಯಿಸುತ್ತಿದ್ದಾರೆ.
ಬಿ.ಸಿ.ರೋಡ್ ನಿಂದ ಮಾಣಿವರೆಗೆ ರಾಷ್ಟ್ರೀಯ ಹೆದ್ದಾರಿ ಅಧೋಗತಿಯಲ್ಲಿದೆ. ತೀರಾ ಎರಡು ವಾರಗಳ ಹಿಂದೆ ರಸ್ತೆ ಹೊಂಡ ಮುಚ್ಚಲು ರೋಡ್ ರೋಲರ್ ಉರುಳಿದ್ದಷ್ಟೇ ಬಂತು. ಇದೀಗ ಪಾಣೆಮಂಗಳೂರು ಹಳೇ ಟೋಲ್ ಗೇಟ್ ಬಳಿಯೇ ಮತ್ತೆ ಹೊಂಡ ಪ್ರತ್ಯಕ್ಷವಾಗಿದೆ. ಇನ್ನು ಕಲ್ಲಡ್ಕ, ದಾಸಕೋಡಿ, ಬರಿಮಾರು ಕ್ರಾಸ್, ಮಾಣಿವರೆಗಿನ ಸಂಚಾರ ಅತ್ಯಂತ ಕಠಿಣವಾಗಿದೆ. ಇದೇ ಮಾರ್ಗದಲ್ಲಿ ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಹಿತ ದೂರದೂರುಗಳಿಗೆ ತೆರಳುವವರು ಇದ್ದಾರೆ. ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಾಗಲೂ ಮಳೆ ಬರ್ತಿದೆಯಲ್ವಾ, ಮಳೆ ಮುಗಿದ ಮೇಲೆ ಹೊಂಡ ಮುಚ್ಚಲಾಗುತ್ತದೆ ಎಂಬ ಉತ್ತರ ಬರುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಪರ ಹೋರಾಟಗಾರರು ವ್ಯಥೆಪಡುತ್ತಾರೆ.
ಇನ್ನು ಬಿ.ಸಿ.ರೋಡ್ ಪೇಟೆಯಿಡೀ ಹೊಂಡಗಳ ಆಗರವಾಗಿದೆ. ಹೊಂಡ ಮುಚ್ಚಿದ್ದೆಲ್ಲವೂ ಒಂದು ಮಳೆಗೆ ಕಿತ್ತು ಬಂದಿದೆ. ಫ್ಲೈಓವರ್ ನಿಂದ ಮಳೆ ಬಂದ ಕೂಡಲೇ ನೀರೂ ಕೆಳಕ್ಕೆ ಹರಿಯುವ ವಿಚಿತ್ರ ವ್ಯವಸ್ಥೆ ಇಲ್ಲಿರುವ ಕಾರಣ, ಫ್ಲೈಓವರ್ ಮೇಲಿಂದ ನೀರು ಧಾರಾಕಾರವಾಗಿ ಒಂದೆಡೆ ರಸ್ತೆಗೆ ಇಳಿದರೆ, ಮತ್ತೊಂದೆಡೆ ಶಾಶ್ವತವಾಗಿ ಪ್ರತಿ ವರ್ಷ ಉದ್ಭವವಾಗುವ ಜಾಗದಲ್ಲೇ ಎದ್ದಿರುವುದು ಸವಾಲಾಗಿದೆ. ಜನಪ್ರತಿನಿಧಿಗಳು ಇಂಥದ್ದು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Be the first to comment on "ಮತ್ತೆ ‘ಅದೇ ಜಾಗ’ದಲ್ಲಿ ಹೊಂಡಗಳು, ಇವಕ್ಕೆ ಶಾಶ್ವತ ಪರಿಹಾರ ಯಾವಾಗ?"