ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಷ್ಟಮಿ, ಚೌತಿ ಸಂದರ್ಭ ಹಲಸಿನೆಲೆಯ ದೊನ್ನೆಯಲ್ಲಿ ಕಡುಬು ಮಾಡುವ ಸಂಪ್ರದಾಯವಿದೆ. ಎರಡೂ ಕೈಗಳಿಲ್ಲದೆ ಕಾಲಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಿ ಸಚಿವ ಸುರೇಶ್ ಕುಮಾರ್ ಗಮನ ಸೆಳೆದ ಬಂಟ್ವಾಳದ ಕೌಶಿಕ್ ಆಚಾರ್ಯ, ಕಾಲಿನಲ್ಲಿ ಎಲೆಗಳನ್ನು ಪೋಣಿಸಿ, ಕೊಟ್ಟಿಗೆ ಕಟ್ಟುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಹುಪ್ರತಿಭೆಯ ಕೌಶಿಕ್, ಹಾಡು, ನೃತ್ಯಗಳಲ್ಲೂ ಮುಂದಿದ್ದಾನೆ. ಈಗಾಗಲೇ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು, ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವು ಸಂಘ, ಸಂಸ್ಥೆಗಳು ಈತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಹೇಳಿವೆ. ಈತ ಕಾಲ್ಬೆರಳಲ್ಲಿ ಪರೀಕ್ಷೆ ಬರೆಯುವ ಫೊಟೋವನ್ನು ಸುರೇಶ್ ಕುಮಾರ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಾಕಿಕೊಂಡ ಬಳಿಕ ರಾಜ್ಯಾದ್ಯಂತ ಗಮನ ಸೆಳೆದಿದ್ದ. ಬಳಿಕ ಪರೀಕ್ಷೆ ಮುಗಿದ ಬಳಿಕ ಪೊಳಲಿಗೆ ಆಗಮಿಸಿದ್ದ ಸಚಿವರು, ಈತನನ್ನು ಭೇಟಿಯಾಗಿ ಮಾತನಾಡಿಸಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ನಂತರ ಕೌಶಿಕ್ ಮತ್ತೊಮ್ಮೆ ಸುದ್ದಿಯಾಗಿದ್ದ. ಇದೀಗ ಕಾಲ್ಬೆರಳಲ್ಲೇ ಮೂಡೆ ಕಟ್ಟುವ ಮೂಲಕ ಸಾಧನೆಗೆ ಅಂಗವೈಕಲ್ಯತೆ ಅಡ್ಡಿ ಅಲ್ಲ, ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾನೆ.
Be the first to comment on "ಚೌತಿ ಹಬ್ಬಕ್ಕೆ ಕಾಲಲ್ಲೇ ‘ಕೊಟ್ಟಿಗೆ’ ಕಟ್ಟುವ ಮೂಲಕ ಗಮನ ಸೆಳೆದ ಕೌಶಿಕ್"