ಶಿಕ್ಷಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಹತ್ತನೇ ತರಗತಿ ವಿದ್ಯಾರ್ಥಿ ಕೌಶಿಕ್ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಅಂಕ ಗಳಿಸಿದ್ದಾನೆ. ಈತನಿಗೆ ಹೆತ್ತವರಾದ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಸಿಹಿ ತಿನಿಸಿ ಸಂಭ್ರಮಿಸಿದರು. ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್ ಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಇದಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಕೌಶಿಕ್ ತನ್ನ ಅಣ್ಣ ಕಾರ್ತಿಕ್. ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾನೆ. ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಲ್ಲಿ ವೈಕಲ್ಯಗಳಿದ್ದರೂ ಕೌಶಿಕ್ ಯಾರ ಸಹಾಯವೂ ಇಲ್ಲದೆ ಕಾಲ್ಬೆರಳಲ್ಲೇ ಬರೆಯಲು ಕಲಿತಿದ್ದಾನೆ. ಅಂಗವೈಕಲ್ಯವಿದೆ ಎಂಬ ಚಿಂತೆಯಿಂದ ಕೊರಗದೆ ಮನೆಯವರೂ ಬಾಲಕನ ಚಟುವಟಿಕೆಗಳಿಗೆ ತುಂಬು ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ಕಾಲಿನ ಸಹಾಯದಲ್ಲೇ ಮಣ್ಣಿನ ಕಲಾಕೃತಿ ರಚಿಸುವುದು, ಡ್ಯಾನ್ಸ್ ಮಾಡುವುದು, ಸೈಕಲ್ ನಲ್ಲಿ ಸವಾರಿ, ಈಜು ಈತನ ಆಸಕ್ತಿಯ ವಿಷಯಗಳು. ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿರುವ ಈ ದಿನಗಳಲ್ಲಿ ಕೌಶಿಕ್ ತನ್ನೆಲ್ಲ ಚಟುವಟಿಕೆಗಳ ಮೂಲಕ ಮನೆಯಲ್ಲಿ ಬಡತನವಿದ್ದರೂ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೆ ಬರೆದು ಉತ್ತಮ ಅಂಕಗಳನ್ನೂ ಗಳಿಸಿ ಸ್ಫೂರ್ತಿಯಾಗಿದ್ದಾನೆ.
Be the first to comment on "ಕಾಲ್ಬೆರಳಲ್ಲಿ ಪರೀಕ್ಷೆ ಬರೆದ ಬಂಟ್ವಾಳದ ಕೌಶಿಕ್ ಫಸ್ಟ್ ಕ್ಲಾಸ್ ಮಾರ್ಕ್"