ವಿಡಿಯೋ, ಮತ್ತಷ್ಟು ವರದಿಗಳಿಗೆ ಕ್ಲಿಕ್ ಮಾಡಿರಿ
ಸಜೀಪನಡು ಗ್ರಾಮ ಪಂಚಾಯಿತಿ ವತಿಯಿಂದ ಸಂಜೀವಿನಿ ಕಟ್ಟಡ, ಶಾಲೆಯ ರಂಗಮಂದಿರ, ಸಿಸಿ ಕ್ಯಾಮರಾ, ಅಂಚೆ ಕಚೇರಿ ಸ್ಥಳಾಂತರ, ಸಜೀಪ ಒನ್ 2020ಗೆ ಚಾಲನೆ ಹಾಗೂ ದಾನಿಗಳ ಸಹಾಯದಿಂದ ನಿರ್ಮಾಣವಾದ ಅಂಗನವಾಡಿ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮ ಗುರುವಾರ ಸಜೀಪನಡುವಿನಲ್ಲಿ ನಡೆಯಿತು.
ಒಂದೇ ಪ್ರದೇಶದಲ್ಲಿ ಸರ್ಕಾರದ ಹಲವು ಸೌಲಭ್ಯ, ಗ್ರಾಪಂ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢಶಾಲೆ, ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಕರಣಿಕರ ಕಚೇರಿ, ಅಂಗನವಾಡಿ, ಸಾರ್ವಜನಿಕ ಗ್ರಂಥಾಲಯ, ಅಂಚೆ ಕಚೇರಿ ಇರುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಸಜೀಪನಡು ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸೀರ್, ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ಜನರ ಸೇವೆ ಮಾಡಲು ಗರಿಷ್ಠ ಪ್ರಯತ್ನ ಮಾಡಿದ್ದೇನೆ ಎಂದರು. ಗ್ರಾಮದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ವಿಧಾನ ಪರಿಷತ್ ಸದಸ್ಯರು ಸಹಿತ ಎಲ್ಲಾ ಜನಪ್ರತಿನಿಧಿಗಳು, ಗ್ರಾಪಂ ಸದಸ್ಯರು, ಪಿಡಿಒ, ಸಿಬ್ಬಂದಿ ಹಾಗೂ ಕಂದಾಯ, ಪೊಲೀಸ್ ಅಧಿಕಾರಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು. ಎಸ್.ಡಿ.ಪಿ.ಐ. ಪಕ್ಷದಿಂದಲೂ ಧನ ಸಹಾಯ ಪಡೆದು ಮಾಹಿತಿ ಕೇಂದ್ರ ಸಹಿತ ಗ್ರಾಮದಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. ಮಾಹಿತಿ ಕೇಂದ್ರ ಕ್ರಾಂತಿಕಾರಿ ಯೋಜನೆಯಾಗಿದ್ದು ಇದರಿಂದ ಗ್ರಾಮದ ಹಾಗೂ ನೆರೆ ಗ್ರಾಮದ ಸಾವಿರಾರು ಮಂದಿ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಹೇಳಿದರು. ಐದು ವರ್ಷಗಳಲ್ಲಿ ರಸ್ತೆ, ಚರಂಡಿ, ನೀರು, ಬೀದಿ ದೀಪ ಸೇರಿದಂತೆ ಗ್ರಾಮದಲ್ಲಿ ಸುಮಾರು 10 ಕೋಟಿ ರೂಪಾಯಿಯಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಸಜಿಪ ನಡು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಅಭಿವೃದ್ಧಿ ಗೊಂಡಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಮಾತನಾಡಿ, ಚುನಾವಣಾ ರಾಜಕೀಯವೇ ಬೇರೆ ಅಭಿವೃದ್ಧಿ ರಾಜಕೀಯವೇ ಬೇರೆ. ಗ್ರಾಮದ ಅಭಿವೃದ್ಧಿಗೆ ನಾನೂ ಅನುದಾನವನ್ನು ನೀಡಿದ್ದೇನೆ. ಯಾರ ಬಳಿ ಅನುದಾನ ಇದೆಯೋ ಅದನ್ನು ಹುಡುಕಿ ತಂದು ಗ್ರಾಮದ ಅಭಿವೃದ್ಧಿಯನ್ನು ಮಾಡುವ ಈ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಅವರ ಕೆಲಸ, ಸುಂದರ ಗ್ರಾಮದ ಕಲ್ಪನೆ ಮಾದರಿಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸಭಾ ಭವನ ಮತ್ತು ರಸ್ತೆ ನಾಮ ಫಲಕವನ್ನು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಉದ್ಘಾಟಿಸಿದರು. ಸರಕಾರಿ ಶಾಲೆಯ ನೂತನ ವೇದಿಕೆಯನ್ನು ಜಿಪಂ ಸದಸ್ಯ ರವೀಂದ್ರ ಕಂಬಳಿ, ದಾನಿಯ ನೆರವಿನಿಂದ ಶಾಲೆಗೆ ಅಲವಡಿಸಿರುವ ಸಿಸಿ ಕೆಮರಾವನ್ನು ಗ್ರಾಪಂ ಸದಸ್ಯ ಇಕ್ಬಾಲ್, ಗ್ರಾಮೀಣ ಅಂಚೆ ಕಚೇರಿಯನ್ನು ಗ್ರಾಪಂ ಉಪಾಧ್ಯಕ್ಷೆ ಶಾಂತಿ ಮೊರೇಸ್ ಉದ್ಘಾಟಿಸಿದರು. ಸಮಾರಂಭದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ವಿವರಗಳಿರುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಗ್ರಾಪಂ ಸದಸ್ಯರಾದ ಇಕ್ಬಾಲ್, ರಶೀದ್, ಸುರೇಶ್, ರಫೀಕ್, ಶಿಸಿಲಿಯಾ ವಸ್, ಮುಮ್ತಾಝ್, ಬಿಫಾತಿಮಾ, ಕಲ್ಯಾಣಿ, ಬಿ.ಕೆ.ನಸೀಮ ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನೊನು ಸ್ವಾಗತಿಸಿದರು, ಗ್ರಾಪಂ ಸಿಬ್ಬಂದಿ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Be the first to comment on "ಸಜೀಪನಡು ಗ್ರಾಪಂನಲ್ಲಿ ಗಮನಾರ್ಹ ಅಭಿವೃದ್ಧಿ, ಕಚೇರಿ ಕೆಲಸಗಳಿಗೆ ತೆರಳುವವರಿಗೆ ಅನುಕೂಲವಾಗುವ ಕಾರ್ಯ"