ಕ್ಷಣಾರ್ಧದಲ್ಲಿ ಪ್ರಿಂಟ್ ಆಗುವಂತೆ ಮಾಡುವ ಸಾಧನಗಳ ಬಗ್ಗೆ ಬಂಟ್ವಾಳ ಪ್ರಿಂಟರ್ಸ್ ಎಸೋಸಿಯೇಶನ್ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಡಿಜಿಟಲ್ ಪ್ರಿಂಟ್ ಎಕ್ಸ್ ಪೋ 2020 ಮಾಹಿತಿ ನೀಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಸಿ.ರೋಡಿನ ನ್ಯಾಯವಾದಿ ಅಶ್ವನಿ ಕುಮಾರ್ ರೈ, ಸಂಘಟನೆಗಳ ಮುಖಾಂತರವಾಗಿ ಒಬ್ಬ ವೃತ್ತಿಪರನು ಕೆಲಸ ಮಾಡುವುದರಿಂದ ಆ ವ್ಯಕ್ತಿ ಆರ್ಥಿಕವಾಗಿ ಸದೃಢನಾಗಬಲ್ಲ. ಸಂಘಟನೆಯನ್ನು ಕಟ್ಟುವುದರಿಂದ ಆ ಸಂಘಟನೆಗೆ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ ಎಂದರು. ಮುದ್ರಣ ರಂಗವು ಆಧುನಿಕ ಬೆಳವಣಿಗೆಗೆ ತೆರೆದುಕೊಳ್ಳುತ್ತಿರವ ಇಂತಹ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು. ದೀಪ ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ತಮ್ಮ ಸಹಿಯನ್ನು ದಾಖಲಿಸುವ ಮೂಲಕ ಉದ್ಘಾಟಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ವರ್ತಕರ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ್ ಚಂದ್ರ ಜೈನ್, ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಲಿಯೋ ಬಾಸಿಲ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಭಟ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿದ್ಯಾಧರ ಜೈನ್ ಮತ್ತು ದಾಮೋದರ್ ಬಿ.ಎಂ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಶ್ರೀಶ ಪ್ರಾರ್ಥಿಸಿದರು. ಅಸೋಸಿಯೇಶನ್ ಜತೆ ಕಾರ್ಯದರ್ಶಿ ಹರೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಯಾದವ ಕುಲಾಲ್ ವಂದಿಸಿದರು. ಎಸೋಸಿಯೇಶನ್ ಸದಸ್ಯ ಮಿಥುನ್ ಕಾರ್ಯಕ್ರಮ ನಿರೂಪಿಸಿದರು.
ಮಾರುತಿ ಆಫೀಸ್ ಅಟೋಮೇಶನ್ ಮೈಸೂರು, ಶ್ರೀ ಭಾರತಿ ಸಿಸ್ಟಮ್ಸ್ ಮಂಗಳೂರು, ತೋನ್ಸೆ ಎಂಟರ್‌ಪ್ರೈಸಸ್ ಮಂಗಳೂರು, ಎಡ್ವಾಂಟೇಜ್ ಕುಂದಾಪುರ ಮಂಗಳೂರು, ಸೆಲ್ಕೋ ಮಂಗಳೂರು, ಅನಿಲ್ ಕಂಪ್ಯೂಟರ್ಸ್ ಬಿ.ಸಿ.ರೋಡು ಅವರಿಂದ ವಿವಿಧ ಡಿಜಿಟಲ್ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಯಿತು. ಉಡುಪಿ ಹಾಗೂ ದ.ಕ. ಜಿಲ್ಲೆಯ ನಾನಾ ಭಾಗಳಿಂದ ಮುದ್ರಣ ಸಂಸ್ಥೆಯ ಮಾಲೀಕರು ಹಾಗೂ ಮುದ್ರಣಾಸಕ್ತರು ಆಗಮಿಸಿದ್ದರು.
ಉದ್ಘಾಟನಾ ಸಮಾರಂಭದ ಛಾಯಾಚಿತ್ರವನ್ನು ಡಿಜಿಟಲ್ ಯಂತ್ರದಲ್ಲಿ ಕ್ಷಣ ಮಾತ್ರದಲ್ಲಿ ಮುದ್ರಿಸಿ ಉದ್ಘಾಟಕರಿಗೆ ನೀಡಲಾಯಿತು. ಸೋಲಾರ್ ಮುದ್ರಣ ಯಂತ್ರದಿಂದ ಮುದ್ರಿಸಲಾಯಿತು. ಪಿಲ್ಲೋ ಕವರ್ ಮುದ್ರಣ, ಛತ್ರಿಯ ಮೇಲೆ ಭಾವಚಿತ್ರ ಮುದ್ರಣ, ಕಾಗದದ ಎರಡೂ ಬದಿಯಲ್ಲಿ ಒಂದೇ ಬಾರಿ ಮುದ್ರಣ ಹೀಗೆ ಎಲ್ಲಾ ಕಂಪನಿಗಳ ವೈಶಿಷ್ಟ್ಯಗಳು ಗಮನ ಸೆಳೆದವು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
Be the first to comment on "ಮುದ್ರಣ ಮಾಧ್ಯಮದಲ್ಲಿ ಏನೇನು ಬೆಳವಣಿಗೆ? ಡಿಜಿಟಲ್ ಪ್ರಿಂಟ್ ಎಕ್ಸ್ ಪೋ ದಲ್ಲಿದೆ ಮಾಹಿತಿ"