ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವವು ಮಾದರಿ ಕಾರ್ಯಕ್ರಮವಾಗಿದ್ದು, ಹಲವು ಶತಮಾನಗಳಿಂದ ದೇವಾಡಿಗ ಸಮಾಜದವರು ಶ್ರೀ ಕ್ಷೇತ್ರದಲ್ಲಿರುವ ಬ್ರಹ್ಮರಥ, ಷಷ್ಠಿರಥದ ಕೆಲಸವನ್ನೇ ಮಾಡುತ್ತಿದ್ದು, ದೇವಾಡಿಗ ಸಮಾಜ ಬಾಂಧವರಿಂದ ಪೊಳಲಿ ಆಡಳಿತ ಮಂಡಳಿಯ ಅನುಮತಿಯ ಮೇರೆ ನೂತನ ಷಷ್ಠಿ ರಥವನ್ನು ಮಾರ್ಚ್ ೧೧ರಂದು ಸಮರ್ಪಿಸಲಾಗುವುದು ಎಂದು ದೇವಾಡಿಗ ಸಮಾಜದ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ ಬಂಟ್ವಾಳ್ ತಿಳಿಸಿದರು.
ಗುರುವಾರ ಬೆಳಿಗ್ಗೆ ಪೊಳಲಿ ಕ್ಷೇತ್ರದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ಷಷ್ಠಿರಥ ಸಮರ್ಪಣೆಗೆ ಎಲ್ಲಾ ದೇವಾಡಿಗ ಸಮಾಜ ಬಾಂಧವರ ಕೊಡುಗೆ ಇದೆ. ಇತರ ಸಮಾಜದವರ ಸಹಕಾರವೂ ಇದೆ ಎಂದರು. ಮಾರ್ಚ್ 8ರಂದು ಪೊಳಲಿ ದೇವಿಯ ಮಹಾದ್ವಾರದಿಂದ ವಿವಿಧ ಭಾಗಗಳಿಂದ ಆಗಮಿಸಿದ ಹೊರೆಕಾಣಿಕೆ ವಾಹನಗಳು ಸೇರಿಕೊಂಡು ಪೊಳಲಿ ದೇವಸ್ಥಾನದವರೆಗೆ ಶೋಭಾಯಾತ್ರೆಯ ಮೂಲಕ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಸಮಾಜದ ಪರವಾಗಿ ಪ್ರಥಮವಾಗಿ ಪೊಳಲಿ ಶ್ರೀ ರಾಜರಾಜೇಶ್ವರಿಗೆ ದೊಡ್ಡರಂಗಾಪೂಜಾ ಉತ್ಸವ ಹಾಗೂ ಷಷ್ಠಿ ಸಮರ್ಪಣಾ ಕಾರ್ಯಕ್ರಮ, ಸಭಾಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಮಹಾನೀಯರಿಗೆ ಅಭಿನಂದನಾ ಸಮಾರಂಭ ಹಾಗೂ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸುಮಾರು ಹತ್ತು ಸಾವಿರ ದೇವಾಡಿಗ ಬಾಂಧವರ ಸಮ್ಮಿಲನ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು. ಇದೇ ವೇಳೆ ಕಾರ್ಯಾಲಯ ಉದ್ಘಾಟನೆ ನಡೆಯಿತು.
ಷಷ್ಠಿರಥ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಗೋಪಾಲ ಎಂ. ಮೊಯ್ಲಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ, ಕೋಶಾಧಿಕಾರಿ ನಾಗೇಶ್ ದೇವಾಡಿಗ ಪೊಳಲಿ, ಉಪಾಧ್ಯಕ್ಷರುಗಳಾದ ಭಾಸ್ಕರ ಎಂ. ಕದ್ರಿ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಕೃಷ್ಣಪ್ಪ ದೇವಾಡಿಗ, ರಮಾನಾಥ ದೇವಾಡಿಗ, ರೋಹಿತಾಶ್ವ ಮರೋಳಿ, ಸದಾಶಿವ ಬೆಂಜನಪದವು, ಪ್ರಶಾಂತ್ ಪೊಳಲಿ ಮತ್ತು ನಾನಾ ಸಮಿತಿಗಳ ಸಂಚಾಲಕರು, ಮುಖಂಡರು ಇದ್ದರು.,
Be the first to comment on "ದೇವಾಡಿಗ ಸಮಾಜದಿಂದ ಮಾ.11ರಂದು ಪೊಳಲಿ ಷಷ್ಠಿರಥ ಸಮರ್ಪಣೆ"