- ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 11ರಿಂದ ಕಾರ್ಯಕ್ರಮಗಳು ಆರಂಭ
ಶನಿವಾರ ಜನವರಿ 11, 2020ರಿಂದ ಭಾನುವಾರ ಜನವರಿ 19, 2020ರವರೆಗೆ ನಾವೂರು ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾಷ್ಟಬಂಧ, ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ನಾನಾ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸುಮಾರು 50 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ. ವಿಶಾಲವಾದ ಚಪ್ಪರದಡಿ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಇದೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಶುಕ್ರವಾರ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತು ಅಧ್ಯಕ್ಷ ರಾಜೇಶ್ ನಾಯ್ಕ್ ಉಳಿಪ್ಪಾಡಿ ಈ ಮಾಹಿತಿ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆನಂದತೀರ್ಥ ಎನ್, ಆಡಳಿತ ಮೊಕ್ತೇಸರ ರಾಮಚಂದ್ರ ಭಟ್ ಅಗ್ರಹಾರಮಠ, ಕಾರ್ಯಾಧ್ಯಕ್ಷರಾಗಿ ಮುರಳೀಧರ ಭಟ್ ಹಳೆಗೇಟು, ಪವಿತ್ರಪಾಣಿ ಹಾಗೂ ಪ್ರಧಾನ ಅರ್ಚಕರಾಗಿ ವೆಂಕಟದಾಸ ಭಟ್ ಅಗ್ರಹಾರಮಠ ಕಾರ್ಯನಿರ್ವಹಿಸುತ್ತಿದ್ದು, ಊರ, ಪರವೂರ ಭಕ್ತರ ಸಹಾಯದೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ. 11ರಂದು ಮಧ್ಯಾಹ್ನ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಿಂದ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದ್ದು. 12ರಿಂದ ನಾನಾ ಕಾರ್ಯಕ್ರಮಗಳು ನಡೆಯುವುದು.16ರಂದು ಪ್ರತಿಷ್ಠೆ, ಅಷ್ಟಬಂಧಕ್ರಿಯೆ ನಡೆಯಲಿದ್ದು, 18ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ಪ್ರತಿದಿನ ನಡೆಯುವ ಧಾರ್ಮಿಕ ಸಭೆಯಲ್ಲಿ ನಾನಾ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
19ರಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ ೧೦ರಿಂದ ವ್ಯಾಘ್ರ ಚಾಮುಂಡಿ ಹಾಗೂ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯುವುದು ಎಂದರು.
ಸರಕಾರದಿಂದ ನಾವೂರು ಕ್ಷೇತ್ರ ಅಭಿವೃದ್ಧಿಗೆ 8 ಲಕ್ಷ ರೂ ಬಿಡುಗಡೆಗೊಂಡಿದ್ದು, ಮುಂದೆಯೂ ನೆರವು ನೀಡುವುದಾಗಿ ಶಾಸಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ ತೀರ್ಥ ಎನ್., ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಭಟ್ ಅಗ್ರಹಾರ ಮಠ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ಭಟ್ ಹಳೇಗೇಟು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ಗೌಡ ಹಳೆಗೇಟು, ಕಾರ್ಯದರ್ಶಿ ರಾಜೇಶ್ ನೆಕ್ಕರೆ, ಕೋಶಾಧಿಕಾರಿ ಗೋಪಾಲ ಸಪಲ್ಯ, ಪ್ರಮುಖರಾದ ಹರೀಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ನಾವೂರು ಕ್ಷೇತ್ರ: 19ರಂದು ಬ್ರಹ್ಮಕಲಶೋತ್ಸವ"