ಕಳೆದ ವಾರ ಸುರಿದ ಮಳೆಗೆ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಬಳಿ ಗುಡ್ಡ ಪ್ರದೇಶದ ಮಣ್ಣು ಸವೆತ ಉಂಟಾಗಿದ್ದು, ಕುಸಿತದ ಭೀತಿ ಎದುರಾಗಿದೆ.
ಗುಡ್ಡ ಪ್ರದೇಶದಿಂದ ಧುಮುಕಿ ಹರಿಯುವ ನೀರಿನ ರಭಸಕ್ಕೆ ಶಾಲಾ ಕಟ್ಟಡದ ಗೋಡೆ ಶಿಥಿಲಗೊಳ್ಳುತ್ತಿದ್ದು, ಭಾಗಶಃ ಹಾನಿಗೀಡಾಗಿದೆ. ಕಳೆದ ವರ್ಷದ ಮಳೆಗೆ ಶಾಲಾ ತರಗತಿ ಕೊಠಡಿಗೆ ನೀರು ಧುಮುಕಿದ್ದು, ಅವಾಂತರ ಸಂಭವಿಸಿತ್ತು.
ಮಣ್ಣು ಜರಿತ ಪ್ರಮಾಣ ಹೆಚ್ಚಾಗಿದ್ದು, ಕುಸಿಯುವ ಸ್ಥಿತಿಗೆ ತಲುಪಿದೆ. ಕುಸಿಯುತ್ತಿರುವ ಗುಡ್ಡ ಸಮೀಪವೇ ಶಾಲಾ ಕಟ್ಟಡ ಇದ್ದು, ಇಲ್ಲಿಯೇ ಮಕ್ಕಳ ಪಾಠ ಪ್ರವಚನ ನಡೆಯುತ್ತಿದೆ. ಸುಮಾರು 14 ವರ್ಷ ಹಳೆಯದಾದ ಶಾಲಾ ಕಟ್ಟಡ ಶಿಥಿಲ ಸ್ಥಿತಿಗೆ ತಲುಪಿದ್ದರೂ, ಸರ್ವ ಶಿಕ್ಷಾ ಅಭಿಯಾನ ಯೋಜನೆಯಡಿ ನೂತನ ಕಟ್ಟಡ ರಚಿಸದೇ ಇಂದು ಮಕ್ಕಳು ಪ್ರಾಣ ಭೀತಿ ಎದುರಿಸಬೇಕಾಗಿದೆ. ಸ್ಥಳೀಯ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್ ಅವರ ತಮ್ಮ ಅನುದಾನ ಬಳಸಿ ಕಟ್ಟಡ ದುರಸ್ತಿ ಕಾರ್ಯ ನಡೆಸಿದ್ದರು.
ಶಾಲಾ ಕಟ್ಟಡದ ಬಳಿ ಪ್ರತಿ ವರ್ಷ ಹೆಚ್ಚುತ್ತಿರುವ ಮಣ್ಣು ಜರಿತವನ್ನು ತಡೆಗಟ್ಟಲು ತಡೆಗೋಡೆ ನಿರ್ಮಿಸುವ ಕಾರ್ಯದಲ್ಲಿ ಜಿಲ್ಲಾಡಳಿತ ವಿಶೇಷ ಗಮನ ಹರಿಸಲಿ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿಶೇಷ ಲಕ್ಷ್ಯ ಹರಿಸಲಿ ಎಂಬುದು ಜನಾಶಯವಾಗಿದೆ.
Be the first to comment on "ಕಾವಳಕಟ್ಟೆ: ಶಾಲಾ ಬಳಿ ಮಣ್ಣು ಕುಸಿತ ಭೀತಿ"