ನೇತ್ರಾವತಿ ನದಿಗೆ ಕಲ್ಮಶಗಳನ್ನು ಹಾಕುವ ಬದಲು ತ್ಯಾಜ್ಯಗಳನ್ನು ಸಂಪೂರ್ಣ ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯಬೇಕಿದ್ದು, ಬಂಟ್ವಾಳದಲ್ಲಿ ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕ (ಎಫ್. ಎಸ್.ಎಸ್.ಎಂ.) ವನ್ನು ಒದಗಿಸಲು ಪ್ರಯತ್ನ ಸಾಗಿದೆ ಎಂದು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹೇಳಿದರು.
ಪಾಣೆಮಂಗಳೂರಿನಲ್ಲಿ ಹಾಸ್ಟೆಲ್ ಭೇಟಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದಅವರು ಕೇಂದ್ರದ ಸ್ವಚ್ಛ ಭಾರತದ ನೀತಿಯಲ್ಲಿ ಅಳವಡಿಸಲಾಗುವ ಫೀಶಿಯಲ್ ಸ್ಲಡ್ಜ್ ಎಂಡ್ ಸೆಪ್ಟೇಜ್ ಮೇನೇಜ್ ಮೆಂಟ್ (ಎಫ್.ಎಸ್.ಎಸ್.ಎಂ) ಅನ್ನು ರಾಜ್ಯ ಜಾರಿಗೊಳಿಸುತ್ತಿದ್ದು, ಒಟ್ಟು 55 ಪಟ್ಟಣ ಹಾಗೂ ಅರೆಪಟ್ಟಣಗಳನ್ನು ಆರಂಭಿಕ ಹಂತದಲ್ಲಿ ಒಳಗೊಳ್ಳುತ್ತದೆ. ಇವುಗಳಲ್ಲಿ ಬಂಟ್ವಾಳವನ್ನು ಸೇರಿಸಬೇಕು ಎಂದು ಇದರ ಯೋಜನಾ ಪ್ರಮುಖರ ಬಳಿ ತಾನು ಒತ್ತಾಯಿಸಿದ್ದು, ಬಂಟ್ವಾಳವನ್ನು ಸೇರ್ಪಡೆಗೊಳಿಸಬಹುದು ಎಂಬ ವಿಶ್ವಾಸ ತನಗಿದೆ. ಯುಜಿಡಿಯಡಿ ಇದುವರೆಗೆ ನಡೆದ ಯಾವುದೇ ಕಾರ್ಯಗಳೂ ಸಂಪೂರ್ಣವಾಗದೇ ಇರುವುದು ಹಾಗೂ ಇದಕ್ಕೆ ಕೆಲವೆಡೆ ಅಡೆತಡೆಗಳಿರುವ ಕಾರಣ ಬಂಟ್ವಾಳದಲ್ಲಿ ಒಳಚರಂಡಿ ಯೋಜನೆ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಯೋಜನೆ ಯುಜಿಡಿಯ ಮಾದರಿಯಲ್ಲಿಲ್ಲ, ಇದು ಸಂಪೂರ್ಣ ವೈಜ್ಞಾನಿಕವಾಗಿ ಆಗುವಂಥದ್ದು ಎಂದರು.
ನೇತ್ರಾವತಿ ನದಿಗೆ ಕಲ್ಮಶಗಳು, ತ್ಯಾಜ್ಯಗಳನ್ನು ಹಾಕುವುದು ಸಲ್ಲದು. ಈ ವಿಚಾರವಾಗಿ ತಾನು ಹಿಂದೆಯೇ ಹೋರಾಟಗಳನ್ನು ನಡೆಸಿದ್ದು, ಬಂಟ್ವಾಳವನ್ನು ಸ್ವಚ್ಛ ಹಾಗೂ ತ್ಯಾಜ್ಯಮುಕ್ತವನ್ನಾಗಿಸಲು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆನ್ನುವ ಇಚ್ಛೆ ಇದ್ದು, ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕದಿಂದ ಇದು ಸಾದ್ಯವಾಗಬಹುದು ಎಂದರು.
Be the first to comment on "ಬಂಟ್ವಾಳದಲ್ಲಿ ಮಾನವ ತ್ಯಾಜ್ಯ ಕಲ್ಮಶ ಸಂಸ್ಕರಣಾ ಘಟಕಕ್ಕೆ ಚಿಂತನೆ: ರಾಜೇಶ್ ನಾಯ್ಕ್"