ಕಡೇಶಿವಾಲಯ ಮತ್ತು ಅಜಿಲಮೊಗರನ್ನು ಸಂಪರ್ಕಿಸುವ ಸೇತುವೆ ಕಾಮಗಾರಿಯನ್ನು ಸ್ಥಳೀಯರ ಬೇಡಿಕೆ ಮೇರೆಗೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿ, ಕಾಮಗಾರಿಗೆ ಮಂಜೂರಾತಿ ಕೊಡಿಸಿ, ಟೆಂಡರ್ ಪ್ರಕ್ರಿಯೆಯವರೆಗೆ ಫಾಲೋಅಪ್ ತನ್ನ ಅವಧಿಯಲ್ಲಿ ನಡೆದಿದ್ದು, ಇದಕ್ಕೆ ಸೌಹಾರ್ದ ಸೇತುವೆ ಎಂಬ ಹೆಸರನ್ನಿಟ್ಟದ್ದೇ ತಾನು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕಡೇಶಿವಾಲಯದಲ್ಲಿ ಸೋಮವಾರ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರು ಈ ಕುರಿತು ಹಲವಾರು ಬಾರಿ ಬೇಡಿಕೆ ಇಟ್ಟಿದ್ದು, ಕಡೇಶಿವಾಲಯ ಮತ್ತು ಮಣಿನಾಲ್ಕೂರು ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ನಿರ್ಮಾಣ ಕುರಿತು ಸರಕಾರಕ್ಕೆ ಪ್ರಸ್ತಾಪಿಸಿದ್ದೆ. ಮಂಜೂರುಗೊಳ್ಳುವುದು ಖಚಿತ ಎಂದಾದಾಗ 2016ರಲ್ಲಿ ತಾನು ಈ ಕುರಿತು ಘೋಷಣೆ ಮಾಡಿ, ಎರಡೂ ಧರ್ಮಗಳ ಸಂಪರ್ಕ ಸೇತುವೆಯಾದ ಕಾರಣ, ಸೌಹಾರ್ದ ಸೇತುವೆ ಎಂಬ ಹೆಸರನ್ನಿಟ್ಟಿದ್ದೆ. ಪಿಡಬ್ಲ್ಯುಡಿ ಯಿಂದ ಗಡಿಯಾರದಿಂದ ಮಾವಿನಕಟ್ಟೆವರೆಗೆ ಸೇತುವೆಯನ್ನು ಸೇರಿಸಿ 31 ಕೋಟಿ ರೂಗಳ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಇದನ್ನು ಕೆಆರ್ ಡಿಸಿಎಲ್ ಗೆ ನೀಡಲಾಯಿತು. 2017ನೇ ಇಸವಿಯಲ್ಲಿ ಸೇತುವೆ ಕಾಮಗಾರಿಗೆ ಮಂಜೂರಾತಿ ದೊರಕಿತು. 19.84 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿಗೆ 2018ರಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದವು, ಇದೀಗ ಕಾಮಗಾರಿ ನಡೆಯುತ್ತಿದ್ದು, ಒಟ್ಟು 30 ತಿಂಗಳಲ್ಲಿ ಕೆಲಸ ಅಂತಿಮಗೊಳ್ಳಬೇಕಿದೆ ಎಂದರು.
ತಾನಿದ್ದಾಗ ಚಾಲನೆ ನೀಡಿದ ಕೆಲಸಗಳಾದ ಪಶ್ಚಿಮವಾಹಿನಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳು ಸಕಾಲಕ್ಕೆ ಜನರಿಗೆ ಉಪಯೋಗಕ್ಕೆ ದೊರಕಬೇಕು. ಈ ಕುರಿತು ತಾನು ಸದಾ ಗಮನಹರಿಸುತ್ತಿರುತ್ತೇನೆ ಎಂದ ರೈ, ಕಡೇಶಿವಾಲಯ ಗಡಿಯಾರ ರಸ್ತೆ ಅಭಿವೃದ್ಧಿ ಕುರಿತೂ ಚಿಂತನೆ ನಡೆದಿತ್ತು ಎಂದರು.
312 ಮೀಟರ್ ಉದ್ದ:
ಸೇತುವೆ 312 ಮೀಟರ್ ಉದ್ದ, 10.5 ಮೀಟರ್ ಎತ್ತರವಿರಲಿದೆ. 19.84 ಕೋಟಿ ರೂ ವೆಚ್ಚವಾಗಲಿದ್ದು, 13 ಪಿಲ್ಲರ್, 14 ಫೌಂಡೇಶನ್ ಗಳು ನಡೆಯಲಿವೆ. ಇಲ್ಲಿದ ರಸ್ತೆ 7.5 ಮೀಟರ್ ಅಗಲವುಳ್ಳದ್ದಾಗಲಿದೆ ಎಂದು ಕಾಮಗಾರಿ ಕುರಿತು ಇಂಜಿನಿಯರ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಸಂಪತ್ ಕುಮಾರ್ ಶೆಟ್ಟಿ, ಈಶ್ವರ ಪೂಜಾರಿ, ಕೆಆರ್ ಡಿಸಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಮಂಜೇಶ್, ಗುತ್ತಿಗೆದಾರ ರಾಘವನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "ತನ್ನ ಅವಧಿಯಲ್ಲಿ ಸೌಹಾರ್ದ ಸೇತುವೆ ಘೋಷಣೆ, ಮಂಜೂರಾತಿ, ಕಾಮಗಾರಿ ಆರಂಭ – ರಮಾನಾಥ ರೈ"