ಕೊಳ್ನಾಡು ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ನಡೆಸಲಾಯಿತು. ಶಾಲಾಭಿವೃದ್ಧಿ ಸಮಿತಿ ಕಾರ್‍ಯಾಧ್ಯಕ್ಷರಾದ ಪ್ರವೀಣ್ ಕೊಟ್ಟಾರಿ ದೀಪ ಬೆಳಗಿ ಕಾರ್‍ಯಕ್ರಮ ಉದ್ಘಾಟಿಸಿ ಶಾಲಾರಂಭದ ದಿನದಿಂದಲೇ ವಿದ್ಯಾರ್ಥಿಗಳು ಶಿಸ್ತು-ಹಾಗೂ ನಿಯಮ ಪಾಲನೆಯೊಂದಿಗೆ ಕಲಿಕೆಯಲ್ಲಿ ತೊಡಗಿಕೊಳ್ಳುವ ಮುಖೇನ ಶಾಲಾ ಫಲಿತಾಂಶವನ್ನು ಉನ್ನತೀಕರಿಸಿಕೊಳ್ಳಬಹುದೆನ್ನುವುದಾಗಿ ತಿಳಿಸಿದರು.
ಇದೇ ಸಂದರ್ಭ ಸರಕಾರದಿಂದ ಕೊಡಮಾಡಲಾದ ಉಚಿತ ಪಠ್ಯ ಪುಸ್ತಕವನ್ನು ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನಾರಾಯಣ ಭಟ್ ನೂಜಿಬೈಲು ಮಾತನಾಡಿ ಮುಗ್ಧ ಮನಸ್ಸುಗಳನ್ನು ದಾರಿ ತಪ್ಪಿಸುವ ಅನೇಕ ವಿದ್ಯಾಮಾನಗಳು ನಮ್ಮ ಕಣ್ಣ ಮುಂದೆ ನಿಲುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರವಿದ್ದು ತಮ್ಮ ಬದುಕಿನ ಗುರಿಯನ್ನು ತಲುಪಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಬಾಲಕೃಷ್ಣ ಸೆರ್ಕಳ ಮಾತನಾಡಿ ಸಕಲ ಮೂಲಭೂತ ಸೌಕರ್‍ಯಗಳೊಂದಿಗೆ ಶಿಕ್ಷಣ ನೀಡುವ ಸರಕಾರದ ಆಶಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವನ ರೂಪಿಸಬೇಕಾಗಿದೆ ಎಂದರು. ಸಭಾ ಕಾರ್‍ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಶೋಕ ಸಿಂಗಾರಕೋಡಿ, ನೆಬಿಸಾ ಕೋಕಳ, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ವಿ ಶ್ರೀರಾಮಮೂರ್ತಿ ಸ್ವಾಗತಿಸಿದರು. ಇಂಗ್ಲೀಷ್ ಶಿಕ್ಷಕಿಯರಾದ ಗೀತಾ ಕೆ ವಂದಿಸಿದರು. ಕಲಾ ಶಿಕ್ಷಕರಾದ ಜಗನ್ನಾಥ ಪಿ ಕಾರ್‍ಯಕ್ರಮ ನಿರ್ವಹಿಸಿದರು.
Be the first to comment on "ಮಂಚಿ ಕೊಳ್ನಾಡು ಶಾಲಾ ಪ್ರಾರಂಭೋತ್ಸವ"