- ಹರೀಶ ಮಾಂಬಾಡಿ
ಬೆಂಕಿಯಿಂದ ತೆಗೆದ ಮೇಲೆ ಮತ್ತೆ ಬಾಣಲೆಗೆ ಹಾಕಿ ಸುಟ್ಟರೆ ಏನಾಗುತ್ತದೆ? ಬಿ.ಸಿ.ರೋಡ್ ನಲ್ಲಿ ಮಂಗಳೂರಿಗೆ ತೆರಳುವ ಬಸ್ ನಿಲ್ಲುವವರ ಸ್ಥಿತಿ ಹಾಗೂ ಬಿ.ಸಿ.ರೋಡಿಗೆ ಬಂದಿಳಿಯುವವರ ಸ್ಥಿತಿ ಹಾಗೇ ಆಗಿದೆ. ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ಬಸ್ಸುಗಳಿಗೆ ಪ್ರವೇಶ ನಿರ್ಬಂಧಿಸಿ ಪೊಲೀಸರು ವಿಧಿಸಿದ ನಿಯಮ ಕಳೆದ ಮೂರು ದಿನಗಳಿಂದ ಪ್ರಯಾಣಿಕರನ್ನು ಗೊಂದಲಕ್ಕೆ ಕೆಡಹಿದೆ. ಸರ್ವೀಸ್ ರಸ್ತೆ ಬಸ್ ಸಂಚಾರಕ್ಕೆ ಅನಾನುಕೂಲವಾದರೂ ಅಲ್ಲಿ ಈಗ ಮಂಗಳೂರಿಗೆ ತೆರಳುವ ಬಸ್ ಗಳಿಗೆ ಕಾಯುವ ಜಾಗ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ನಿಗದಿಯಾಗಿದ್ದ ಜಾಗದಲ್ಲಿ ಬಸ್ ಬೇ ನಿರ್ಮಿಸಿದರೆ ಬಿ.ಸಿ.ರೋಡಿಗೆ ಬಂದಿಳಿಯುವ ಪ್ರಯಾಣಿಕರಿಗೆ ಹಾಗೂ ನಿಲ್ಲುವವರಿಗೆ ಅನುಕೂಲವಾಗುತ್ತಿತ್ತು, ಇಲ್ಲಿ ಠಳಾಯಿಸುವುದು ಬೇಡ ಆದರೆ ಇಳಿಸಿ ಹೋಗಬಹುದಿತ್ತು ಎಂಬ ಮಾತು ಈಗ ಕೇಳಿಬರುತ್ತಿದೆ. ಇದರ ಜೊತೆಗೆ ಬದಲಾವಣೆಗಳನ್ನು ಮಾಡುವ ಸಂದರ್ಭ, ಪ್ರಯಾಣಿಕರಿಗೆ ಪೂರ್ವಸೂಚನೆಗಳನ್ನು ನೀಡುವುದೂ ಸಾಮಾನ್ಯವಾದ ವಿಚಾರವಾದರೂ ಅದ್ಯಾವುದೂ ಇಲ್ಲದೆ ದಿಢೀರನೆ ಬಸ್ ಸಂಚಾರವನ್ನು ಬದಲಾಯಿಸಿರುವುದು ಗೊಂದಲಕ್ಕೆ ಕಾರಣ. ಪ್ರಯಾಣಿಕರು ಕಾಲಕ್ರಮೇಣ ಇದಕ್ಕೆ ಒಗ್ಗಿಕೊಳ್ಳುತ್ತಾರೆ ಎಂಬ ಧೈರ್ಯ ಆಡಳಿತಕ್ಕಿದೆ. ನೆಗಡಿಯಾಗುತ್ತದೆ ಎಂದರೆ ಮೂಗು ಕೊಯ್ಯುತ್ತೇನೆ ಅಂದ ಹಾಗಾಯಿತು ಕತೆ!
ಸೋಮವಾರ ಬೆಳಗ್ಗೆ ಮಂಗಳೂರಿಗೆ ತೆರಳುವ ಬಸ್ಸುಗಳಿಗೆ ಕಾಯುವ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಬೇಕಾಯಿತು. ಸರ್ವೀಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಸಂಚಾರಕ್ಕೆ ತಡೆಯೊಡ್ಡಿದ ಪೊಲೀಸರು, ಮೇಲ್ಸೆತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ದಿಢೀರ್ ನಿರ್ಧಾರದಿಂದ ಸಾರ್ವಜನಿಕರು ಗೊಂದಲಕ್ಕೊಳಗಾದರು. ಆ ಗೊಂದಲ ಬುಧವಾರದವರೆಗೆ ಮುಂದುವರಿಯಿತು.
ಬುಧವಾರ ಬಸ್ ಗಳು ಫ್ಲೈಓವರ್ ಆರಂಭದಲ್ಲಿ ನಿಂತು ಜನರನ್ನು ಕರೆಯಲು ಆರಂಭಿಸಿದ ವೇಳೆ ಟ್ರಾಫಿಕ್ ಪೊಲೀಸರು ಆಗಮಿಸಿ, ಯಾವುದೇ ಬಸ್ಸುಗಳು ಅಲ್ಲಿ ನಿಲ್ಲದಂತೆ ಸೂಚನೆ ನೀಡಿದರು. ಇದೀಗ ಕೆಎಸ್ಸಾರ್ಟಿಸಿ ಬಸ್ಸುಗಳು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ಸುಗಳೂ ಅಲ್ಲೇ ಪಕ್ಕ ನಿಲ್ಲುತ್ತಿವೆ. ಬಿ.ಸಿ.ರೋಡಿಗೆ ಆಗಮಿಸುವ ಪ್ರಯಾಣಿಕರು ಹಾಗೂ ಮಂಗಳೂರು ಕಡೆಗೆ ತೆರಳುವವರು ಅಲ್ಲಿಗೇ ಹೋಗಬೇಕು.
ಖಾಸಗಿ ಬಸ್ ನಿಲ್ದಾಣವನ್ನು ಇನ್ನೂ ನಿರ್ಮಿಸಲಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಮೊದಲು ಸರ್ವೀಸ್ ರಸ್ತೆಯ ಪಕ್ಕ ಬಸ್ ನಿಲ್ದಾಣ ನಿರ್ಮಿಸುವ ವಿಚಾರವಾಗಿ ಹಲವು ಪರ, ವಿರೋಧ ಹೇಳಿಕೆಗಳು ಬಂದವು. ಆದರೆ ಅದಾಗಿ ವರ್ಷವಾಗುತ್ತಾ ಬಂದರೂ ಯಾವುದೇ ಪ್ರಗತಿಯಾಗಿಲ್ಲ. ಇಲ್ಲಿ ಬಸ್ ನಿಲ್ದಾಣವೂ ನಿರ್ಮಾಣ ಆಗಿಲ್ಲ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "B.C.Road ನಲ್ಲಿ ಬಸ್ Road ಬದಲು, ಪ್ರಯಾಣಿಕರಿಗೆ ದಿಗಿಲು"