ನಡೆದಾಡುವ ದೇವರು ನಮ್ಮ ಹೃದಯದೊಳಗೇ ಇದ್ದಾರೆ

www.bantwalnews.com

ನಡೆದಾಡುವ ದೇವರೆಂದೇ ನಾಡಿನಾದ್ಯಂತ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ ಸಂತ ಸಿದ್ದಗಂಗಾಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಇಂದು ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಇಲ್ಲೇ ಇದ್ದಾರೆ, ನಮ್ಮ ಹೃದಯದೊಳಗೇ ನೆಲೆಸಿದ್ಧಾರೆ. ಸದಾ ಕಾಲ ಸ್ಫೂರ್ತಿಯಾಗಿರುತ್ತಾರೆ ಎಂಬ ನಂಬಿಕೆಯೊಂದಿಗೆ ಲಕ್ಷಾಂತರ ಭಕ್ತರು ಶ್ರೀಗಳ ದರ್ಶನ ಪಡೆದರು.

ಈ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಮಧ್ಯಾಹ್ನ 2.ಗಂಟೆಗೆ ಘೋಷಣೆ ಮಾಡಿದರು. ಶ್ರೀಗಳು ಸೋಮವಾರ ಬೆಳಗ್ಗೆ 11.44 ಕ್ಕೆ ಶಿವಸಾಯುಜ್ಯಗೊಂಡರು. ಮಂಗಳವಾರ ಮಧ್ಯಾಹ್ನ 3 ಗಂಟೆ ವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ಮಠದ ಆವರಣದಲ್ಲಿ ಅವಕಾಶ ಮಾಡಿಕೊಡಲಾಗುವುದು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ,  ಸಚಿವರು, ರಾಜಕೀಯ ನಾಯಕರು, ಉದ್ಯಮಿಗಳು, ರಾಜ್ಯದ ಹಲವು ಮಠಗಳ ಸ್ವಾಮೀಜಿಗಳು ತುಮಕೂರು ಸಿದ್ದಗಂಗಾ ಮಠಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.

ಲಕ್ಷಾಂತರ ಮಂದಿ ಈಗಾಗಲೇ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಮಂಗಳವಾರ ಸಂಜೆ ಕ್ರಿಯಾ ಸಮಾಧಿ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಹಿತ ಸ್ಥಳೀಯ ಅನೇಕ  ಧಾರ್ಮಿಕ, ರಾಜಕೀಯ ಮುಖಂಡರು ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ರಾಘವೇಶ್ವರ ಶ್ರೀಗಳ ಸಂತಾಪ:

ಸಿದ್ದಗಂಗಾ ಮಠದ ಶ್ರೀಗಳು ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ್ದರು. ಶ್ರೀಮಠದ ಗೋಸಂರಕ್ಷಣೆಯ ಕಾರ್ಯಗಳಿಗೆ ಸದಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದ ಸಿದ್ದಗಂಗಾ ಶ್ರೀಗಳು, ರಾಮಚಂದ್ರಾಪುರಮಠದ ಗೋಸಂರಕ್ಷಣಾ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.    ಸಿದ್ದಗಂಗಾ ಶ್ರೀಗಳಿಗೆ ಗೋಕರ್ಣದ “ಸಾರ್ವಭೌಮ” ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  2017 ರ ಭೀಕರ ಬರಗಾಲದಲ್ಲಿ ಶ್ರೀರಾಮಚಂದ್ರಾಪುರಮಠದಿಂದ ‘ಗೋಪ್ರಾಣಭಿಕ್ಷಾ’ ಆಂದೋಲನ ಕೈಗೊಂಡು ಲಕ್ಷಾಂತರ ಗೋವುಗಳಿಗೆ ಮೇವು ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳ ಗೌರವಾರ್ಥ 110 ಲೋಡು ಮೇವನ್ನು ಮಲೆಮಹದೇಶ್ವರ ಬೆಟ್ಟದ ಗೋವುಗಳಿಗೆ ನೀಡಿ, ಶತಾಯುಷಿಗೆ ಅರ್ಥಪೂರ್ಣವಾದ ಗೌರವ ಸೂಚಿಸಲಾಗಿತ್ತು. ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರದಿಂದ ನಡೆದ ‘ಅಭಯಾಕ್ಷರ’ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದ ಪೂಜ್ಯ ಶಿವಕುಮಾರ ಸ್ವಾಮಿಗಳು, ಅಭಯಾಕ್ಷರಕ್ಕೆ ಸಹಿ ಮಾಡಿ ಸಮಗ್ರ ದೇಶದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸುವಂತೆ ತಮ್ಮ ಹಕ್ಕೊತ್ತಾಯ ಸಲ್ಲಿಸಿದ್ದರು.’ಅಭಯಾಕ್ಷರ’ ಅಭಿಯಾನದಲ್ಲಿ ಸಂಗ್ರಹಿತವಾದ ಸುಮಾರು ಒಂದು ಕೋಟಿ ಅರ್ಜಿಗಳನ್ನು ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ದಿನವೇ ಪೂಜ್ಯರು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಅಭಯಾಕ್ಷರ ಸಲ್ಲಿಕೆಯನ್ನು ರಾಜ್ಯಾದ್ಯಂತ ಮುಂದೂಡಲಾಗಿದ್ದು, ಸಂತಾಪ ಸಭೆಯನ್ನು ನಡೆಸುವ ಮೂಲಕ ಗೋಪ್ರೇಮಿ ಸಂತಶ್ರೇಷ್ಠರಿಗೆ ಭಾರತೀಯ ಗೋಪರಿವಾರ ಹಾಗೂ ಶ್ರೀಮಠದ ಕಾಮದುಘಾ ವಿಭಾಗ ಶ್ರದ್ಧಾಂಜಲಿ ಸಲ್ಲಿಸಿದೆ. ಕಾಯಕಯೋಗಿ ಶ್ರೀಶ್ರೀ ಶಿವಕುಮಾರ ಸ್ವಾಮಿಗಳು ನಾಡಿಗೆ ಸಲ್ಲಿಸಿದ ಸೇವೆ – ತ್ಯಾಗ – ಅನುಪಮ ಕಾರ್ಯಗಳು ನಾಡಿನ ಜನತೆಗೆ ಆದರ್ಶವಾಗಲಿ, ಶ್ರೀ ಸೀತಾರಾಮಚಂದ್ರ – ಚಂದ್ರಮೌಳೀಶ್ವರ – ರಾಜರಾಜೇಶ್ವರ್ಯಾದಿ ದೇವತಾನುಗ್ರಹದಿಂದ  ಪೂಜ್ಯರ ಆತ್ಮಕ್ಕೆ ಪರಮಶಾಂತಿ ಲಭಿಸಲಿ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶಿಸಿದ್ದಾರೆ.

ಒಡಿಯೂರು ಶ್ರೀಗಳ ಸಂತಾಪ:

ಭಕ್ತಮಾನಸದಲ್ಲಿ ಅಚ್ಚಳಿಯದೆ ಉಳಿದ ಶತಮಾನದ ಪುಣ್ಯಪುರುಷ, ಸಾಮರಸ್ಯದ ಹರಿಕಾರ, ಶಿಕ್ಷಣ ಸಂಸ್ಥೆಯನ್ನು ದೇಶ-ವಿದೇಶಗಳಲ್ಲಿಯೂ ಸ್ಥಾಪಿಸಿದ್ದ ಸಿದ್ಧಗಂಗಾ ಶ್ರೀಗಳ ಶಿಕ್ಷಣ ಪ್ರೀತಿ ಹಾಗೂ ಅನ್ನದಾಸೋಹ ಅನನ್ಯವಾದುದು. ಲಿಂಗೈಕ್ಯರಾದ ಶ್ರೀಗಳ ಅಗಲುವಿಕೆ ದೇಶಕ್ಕೆ ಹಾಗೂ ಅಧ್ಯಾತ್ಮಲೋಕಕ್ಕೆ ತುಂಬಲಾರದ ನಷ್ಟ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ನಡೆದಾಡುವ ದೇವರು ನಮ್ಮ ಹೃದಯದೊಳಗೇ ಇದ್ದಾರೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*