ಇಲ್ಲಿ ನಾವು ಮಕ್ಕಳಿಗೆ ಆಟ, ಪಾಠವನ್ನಷ್ಟೇ ಅಲ್ಲ, ಗಿಡಗಳ ಮೇಲೆ ವ್ಯಾಮೋಹ ಹೊಂದುವಂತೆ ಪ್ರೇರೇಪಿಸುತ್ತೇವೆ. ಹೀಗಂದರು ಶಿಕ್ಷಕ ಭಾಸ್ಕರ ನಾಯ್ಕ್.
ಇವರು ಈ ಶಾಲೆಯಲ್ಲಿ ಪಿ.ಟಿ. ಮಾಸ್ತ್ರು. ಅಂದರೆ ಶಾರೀರಿಕ ಶಿಕ್ಷಣದ ಶಿಕ್ಷಕ. ಪುಣಚ ಕಡೆಯ ಈ ಮಾಸ್ತ್ರೀಗೆ ಕೃಷಿಯಲ್ಲಿ ಆಸಕ್ತಿ. ಮನೆಯಲ್ಲೂ ತೋಟ ಉಂಟು. ಶಾಲೆಯನ್ನೂ ಹಸಿರಾಗಿಸಲು ಅವರು ಹೊರಟಾಗ ಬೆಂಬಲ ನೀಡಿದ್ದು ಇಡೀ ಶಿಕ್ಷಕ ಸಮೂಹ.
ಶಾಲೆಯಲ್ಲಿ ಬೆಳಗ್ಗೆ ಅನ್ನಪೂರ್ಣ (ಸತ್ಯಸಾಯಿ ಟ್ರಸ್ಟ್ ಪ್ರವರ್ತಿತ) ಯೋಜನೆಯನ್ವಯ ಉಪಾಹಾರಕ್ಕೆ ತೋಟದ ವಸ್ತುಗಳು ಬಳಕೆಯಾಗುತ್ತವೆ. ಶಾಲೆಯ ತೋಟ ಮಕ್ಕಳಿಗೆ ಹೊಟ್ಟೆ ತುಂಬಾ ಸಮೃದ್ಧ ಸಾವಯವ ಊಟಕ್ಕೂ ಕಾರಣವಾಗಿದೆ. ಮಧ್ಯಾಹ್ನದೂಟಕ್ಕೆ ಸರಕಾರದ ಅಕ್ಕಿ, ಬೇಳೆಗಳೊಂದಿಗೆ ಶಾಲಾ ತೋಟದಲ್ಲಿ ಬೆಳೆದ ತೆಂಗಿನಕಾಯಿ, ತರಕಾರಿಗಳು, ಹಣ್ಣು ಹಂಪಲುಗಳು ಬೋನಸ್.
ಎಲ್ಲಿದೆ ಶಾಲೆ:
ಈ ಪ್ರದೇಶದ ಸುತ್ತಮುತ್ತಲೂ ಹಸಿರು. ಹಾಗೆಯೇ ಶಾಲೆಯ ಆವರಣವೂ ಹಸಿರು. ಕಾಂಕ್ರೀಟ್ ಕಟ್ಟಡ, ಪೈಂಟುಗಳಿಂದ ವರ್ಣರಂಜಿತವಾಗಿ ಥಳಕು ತುಂಬಿದ ಶಾಲೆಗಳಿಂದ ಇದು ಭಿನ್ನ. ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಲ್ಲಿ ಶಾಲಾ ಪಾಠದೊಂದಿಗೆ ಆಹ್ಲಾದಕರವಾದ ಹಸಿರಿನೊಂದಿಗೆ ಆಟ. ಅಕ್ಷರ ಕಲಿಕೆಯೊಂದಿಗೆ ಗಿಡ, ಮರಗಳಿಂದ ಕೂಡಿದೆ ಕೈತೋಟ.
ವಿಶೇಷವೆಂದರೆ, ಎಲ್ಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಕೊರಗಿದೆ. ಆದರೆ ಇಲ್ಲಿ ಹಾಗಲ್ಲ, ಕಳೆದ ವರ್ಷದ ಲೆಕ್ಕಾಚಾರಕ್ಕೆ ಹೋಲಿಸಿದರೆ, ಈ ವರ್ಷ ಮಕ್ಕಳ ಸೇರ್ಪಡೆ ಜಾಸ್ತಿ. 233 ಮಕ್ಕಳ ಸಮೃದ್ಧ ಶಾಲೆ ಇದು.
ಏನೇನಿದೆ:
ಇಲ್ಲಿ 70 ಅಡಕೆ ಗಿಡಗಳಿವೆ. ಔಷಧೀಯ ಸಸ್ಯಗಳ ಕೈತೋಟವೇ ಇದೆ. ಹಣ್ಣು, ತರಕಾರಿಗಳನ್ನು ಬೆಳೆಸಲಾಗುತ್ತದೆ. ಶಾಲೆಯ ಪರಿಸರ ಕ್ಲಬ್ ಸಹಿತ ಮಕ್ಕಳೆಲ್ಲರಿಗೂ ಇವುಗಳೊಂದಿಗೆ ಬೆರೆಯುವ ಸಂಭ್ರಮವನ್ನು ಶಿಕ್ಷಕರು ಕಲಿಸಿಕೊಟ್ಟಿದ್ದಾರೆ. ಕುಂಬಳ ಕಾಯಿ, ನುಗ್ಗೆ, ಸೋರೆಕಾಯಿಗಳನ್ನು ಮಕ್ಕಳು ಇಲ್ಲಿ ನೋಡಿ ಕಲಿಯುತ್ತಾರೆ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನಾಳೆ ಶಾಲೆಗೆ ಬರುವಾಗ ಹಣ್ಣು ತನ್ನಿ ಎಂಬ ಚೀಟಿ ಕೊಡಲಾಗುತ್ತದೆ. ಆದರೆ ಇಲ್ಲಿ ಹಾಗಲ್ಲ, ಶಾಲೆಯಲ್ಲೇ ಹಣ್ಣು, ತರಕಾರಿ ಬೆಳೆಸುವ ಕುರಿತು ಪಾಠ ಮಾಡಲಾಗುತ್ತದೆ. ಅವರಿಂದಲೇಕಟಾವು ಮಾಡಿಸಿ ಫಸಲು ಬೆಳೆಸಿದ ಮಕ್ಕಳಿಗೇ ನೀಡಿ ಅಡುಗೆ ತಯಾರಿಸಿಕೊಂಡು ಬಂದು ಶಾಲೆಯಲ್ಲಿ ಸವಿಯುವ ಅವಕಾಶ ನೀಡಲಾಗಿದೆ. ಸೊಪ್ಪು, ತರಕಾರಿಗಳನ್ನು ಅಡುಗೆಗೆ ಬಳಸುವುದಷ್ಟೇ ಅಲ್ಲ, ಅವುಗಳನ್ನು ಸಾವಯವ ವಿಧಾನದಲ್ಲಿ ಬೆಳೆಸುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯುತ್ತಿದ್ದಾರೆ.
ಶಾಲೆಯ ಕೈತೋಟದಲ್ಲಿ ಬೆಳೆಯುವ ಯಾವುದೇ ತರಕಾರಿಗಳಿಗೆ ಕ್ರಿಮಿನಾಶಕ ಬಳಸದೇ ಕೇವಲ ಎಲೆಗೊಬ್ಬರ ಮಾತ್ರ ಬಳಸಲಾಗುತ್ತಿದೆ. ಇದರ ಜೊತೆಗೆ ತೋಟದಲ್ಲಿ ಪ್ರತ್ಯೇಕವಾಗಿ ಔಷಧಿ ವನವನ್ನೂ ನಿರ್ಮಿಸಲಾಗಿದ್ದು, ಇಲ್ಲಿ ಸಾಕಷ್ಟು ಬಗೆಯ ಔಷಧೀಯ ಗಿಡವನ್ನು ನೆಟ್ಟು ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.
Be the first to comment on "ಆಟ, ಪಾಠದ ಜೊತೆ ಕೈತೋಟ"