ಕನಿಷ್ಠ ವೇತನ ಹಾಗೂ ತುಟ್ಟಿಭತ್ತೆ ಅತೀ ಶೀಘ್ರ ಪಾಲಿಗೆ ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಹಕ್ಕೊತ್ತಾಯ ಎಐಟಿಯುಸಿ ಮತ್ತು ಸಿಐಟಿಯು ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೀಡಿ ಕಚೇರಿ ಎದುರು ನಡೆಯಿತು.
ಕರ್ನಾಟಕ ರಾಜ್ಯ ಸರಕಾರ ಕನಿಷ್ಠ ವೇತನ ಕಾಯ್ದೆ ಸೆಕ್ಷನ್ 5(1)(ಎ) ಅಡಿಯಲ್ಲಿ ರಚಿಸಿಲಾದ ತ್ರಿಪಕ್ಷೀಯ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಘೋಷಿಸಲ್ಪಟ್ಟ ಕನಿಷ್ಠ ಕೂಲಿ ಸಾವಿರ ಬೀಡಿಗೆ ರೂ.210 ನ್ನು ಬೀಡಿ ಮಾಲಕರು 2018 ಎಪ್ರಿಲ್ 1 ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಿತ್ತು. ಆದರೆ ಮಾಲಿಕರು 8 ತಿಂಗಳು ಕಳೆದರೂ ತಾವು ಸ್ವತಃ ಸಹಿ ಮಾಡಿ ಒಪ್ಪಿರುವ ಈ ಕೂಲಿಯನ್ನು ನೀಡಲು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ.ಈ ಹಿನ್ನೆಲೆಯಲ್ಲಿ ಬೀಡಿ ಮಾಲಿಕರು ಕಾರ್ಮಿಕರ ನೈಜ ಸ್ಥಿತಿಯನ್ನು ಅರ್ಥೈಸಿಕೊಂಡು ಕೂಡಲೇ ಕನಿಷ್ಠ ವೇತನ ನೀಡಬೇಕು ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಈ ಸಂದರ್ಭ ಒತ್ತಾಯಿಸಿದರು.
ಕನಿಷ್ಠ ವೇತನ ಜ್ಯಾರಿಗಾಗಿ ಜಿಲ್ಲೆಯ ಕಾರ್ಮಿಕ ಸಂಘಟನೆಗಳು ಹಲವಾರು ಹಂತದ ಹೋರಾಟಗಳನ್ನು ಮಾಡಿದೆ. ವಾಹನ ಜಾಥಾ, ಮುಷ್ಕರ, ಧರಣಿ ಸತ್ಯಾಗ್ರಹ ನಡೆಸಿ ಮಾಲಕರನ್ನು ಒತ್ತಾಯಿಸಲಾಗಿದೆ. ಆದರೂ ಮಾಲಿಕರು ತನ್ನ ಹಠಮಾರಿ ಧೋರಣೆ ಕೈಬಿಡದೇ ಕಾರ್ಮಿಕರನ್ನು ಕಡೆಗಣಿಸುತ್ತಿರುದನ್ನು ಮನಗಂಡು ಎಲ್ಲಾ ಬೀಡಿ ಕಂಪೆನಿಗಳ ಮುಂದೆ ಈ ಹಕ್ಕೊತ್ತಾಯ ಚಳವಳಿ ನಿರಂತರವಾಗಿ ನಡೆಯಲಿದೆ ಎಂದರು.
ಕನಿಷ್ಠ ವೇತನ ಜ್ಯಾರಿಗೊಳಿಸಲು ಉಪ ಕಾರ್ಮಿಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ನಡೆದ ಮೂರೂ ಸಭೆಗಳಲ್ಲೂ ಮಾಲಿಕರು ವಿವಿಧ ರೀತಿಯ ನೆಪವೊಡ್ಡಿ ಕಾಲಾಹರಣ ಮಾಡುತ್ತಿರುವುದು ಬೀಡಿ ಮಾಲಿಕರ ಕಾರ್ಮಿಕ ವಿರೋಧಿ ಧೋರಣೆಯೇ ಸರಿ ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರನ್ನು ಅನಗತ್ಯ ಸತಾಯಿಸದೇ ಕಾನೂನಾತ್ಮಕವಾಗಿ ನೀಡಬೇಕಾದ ಮಜೂರಿ ನೀಡಲು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಮುಂದಾಳು ಜೆ.ಬಾಲಕೃಷ್ಣ ಶೆಟ್ಟಿ ಮಾತಾಡಿದರು.ನೇತೃತ್ವವನ್ನು ಎಐಟಿಯುಸಿ ಮುಖಂಡರಾದ ಬಾಬು ಭಂಡಾರಿ, ಕೆ.ಈಶ್ವರ, ಸರಸ್ವತಿ ಕೆ., ಲತಾ ಬರಿಮಾರು, ಚಂದಪ್ಪ ನಾವುರ, ಹಾಗೂ ಸಿಐಟಿಯು ಮುಖಂಡರಾದ ರಾಮಣ್ಣ ವಿಟ್ಲ, ಸಂಜೀವ ಬಂಗೇರ, ಲೋಲಾಕ್ಷಿ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ಸಿಐಟಿಯು ಮುಖಂಡ ಉದಯ ಕುಮಾರ್ ವಂದಿಸಿದರು.
Be the first to comment on "ಬೇಡಿಕೆ ಈಡೇರಿಕೆ ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಹಕ್ಕೊತ್ತಾಯ"