ರಾಜ್ಯ ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಕರಾವಳಿಯ ಅಡಿಕೆ, ಇತರ ಬೆಳೆಗಳಿಗೆ ಕೊಳೆ ರೋಗ ಬಾಧಿಸಿದ್ದು, ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನ. 19ರಂದು ಬೆಂಗಳೂರಿನ ವಿಧಾನಸೌಧ ಮುತ್ತಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಲಿದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದ್ದಾರೆ.
ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ ಬೆಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮೆರವಣಿಗೆ ಮೂಲಕ ವಿಧಾನ ಸೌಧಕ್ಕೆ ತೆರಳಲಿದ್ದು, ಬಂಟ್ವಾಳ ತಾಲೂಕಿನಿಂದ 100 ಕ್ಕೂ ಹೆಚ್ಚು ರೈತರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಅದಲ್ಲದೆ, ರೈತರ ಸಾಲ ಮನ್ನಾ ಹಾಗೂ ಕೃಷಿ ಉತ್ಪನ್ನಗಳಿಗೆ ಶಾಸನಾತ್ಮಕವಾಗಿ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ನ.೩೦ರಂದು ನವದೆಹಲಿಯ ಜಂಥರ್‌ಮಂಥರ್ ನಲ್ಲಿ ” ಪಾರ್ಲಿಮೆಂಟ್ ಚಲೋ ಹಾಗೂ ರೈತ ಸಂಸತ್ತು ನಡೆಯಲಿದೆ. ಇದಕ್ಕೆ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವಾದ ಅಖಿಲ ಭಾರತ ಕೃಷಿ ಸಂಘಟನೆಗಳ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ೨೧ ರಾಜಕೀಯ ಪಕ್ಷಗಳ ಒಪ್ಪಿಗೆಯಂತೆ 2 ಖಾಸಗಿ ಮಸೂದೆಗಳನ್ನು ಸಂಸತ್‌ನಲ್ಲಿ ಮಂಡಿಸಿ, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ, ಸಂಸತ್ ಅವಿರೋಧವಾಗಿ ಅಂಗೀಕರಿಸುವ ಮೂಲಕ ದೇಶದ ಕೃಷಿ ಉತ್ಪನ್ನಗಳಿಗೆ ಉದ್ಘಾಟನಾ ವೆಚ್ಚ 1.5 ರಷ್ಟು ಶಾಸನಾತ್ಮಕ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಬೇಡಿಕೆಗಳು:
ಗ್ರಾಮೀಣ ರೈತರ ಸಂಪೂರ್ಣ ಸಾಲ ಮನ್ನಾ, ಗ್ರಾಮೀಣ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೆಜ್ ರೂಪಿಸಿ ಕೇಂದ್ರ ಸರಕಾರ ಶೇ. ೬೫, ರಾಜ್ಯ ಸರಕಾರ ಶೇ. ೩೫ ರಷ್ಟು ಅನುಪಾತದಲ್ಲಿ ಅನುದಾನ ನೀಡಬೇಕು, ದಿ.ಕೆ.ಎಸ್. ಪುಟ್ಟಣ್ಣಯ್ಯ ಅವರ ೨೦೧೬ರ ಖಾಸಗಿ ಬಿಲ್ ಅಂಶಗಳನ್ನು ಪರಿಗಣಿಸಬೇಕು. ಮಂಕಿಪಾರ್ಕ್ ನಿರ್ಮಾಣ, ಕೃಷಿ ಉತ್ಪನ್ನ ಗಳಿಗೆ ಬೆಂಬಲ ಬೆಲೆ, ಮಹಾತ್ಮಗಾಂಧಿ ಉದ್ಯೋಗ ಭರವಸೆ ಖಾತ್ರಿ ಯೋಜನೆಯನ್ನು ಕೃಷಿ ಕುಟುಂಬಕ್ಕೆ ವಿಸ್ತರಿಸಬೇಕು. ಸರಳ ಸಾಲ ನೀತಿ ಜಾರಿ, ಶಾಸನಾತ್ಮಕ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ ಮಾಡಲಾಗುವುದು ಎಂದು ರವಿ ಕಿರಣ್ ಪುಣಚ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಘಟಕ ಅಧ್ಯಕ್ಷ ಹರ್ಷಿತ್ ಮಾದಾಯಿ, ತಾಲೂಕು ಉಪಾಧ್ಯಕ್ಷರಾದ ಜೇರೋಮ್ ಡಿಸೋಜಾ ಆಜೇರು, ಸತೀಶ್ಚಂದ್ರ ರೈ ಕಡೇಶಿವಾಲ್ಯ ಉಪಸ್ಥಿತರಿದ್ದರು.
Be the first to comment on "ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ 19ರಂದು ವಿಧಾನಸೌಧ ಮುತ್ತಿಗೆ"