- ಹರೀಶ ಮಾಂಬಾಡಿ
ಯಾಕೆ ಹೀಗೆ?
ಸುಮ್ಮನೆ ಒಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಸುತ್ತು ಹಾಕಿ. ಅಲ್ಲಿ ಜನಜಂಗುಳಿಯೇ ಕಾಣಿಸುವುದಿಲ್ಲ. ಬಸ್ ನಿಲ್ದಾಣದಲ್ಲಿ ಇರುವ ಜನರು ರೈಲ್ವೆ ನಿಲ್ದಾಣದಲ್ಲೂ ಸಮಾನವಾಗಿ ಇರುತ್ತಾರೆ ಎಂದಾದರೆ ನೀವು ಮಂಜೇಶ್ವರ, ಉಪ್ಪಳ, ಕಾಞಂಗಾಡ್ ನಂಥ ಜಿಲ್ಲಾ ಕೇಂದ್ರವಲ್ಲದ ಸಣ್ಣ ಪಟ್ಟಣಗಳಿಗೆ ಹೋಗಬೇಕು. ನಮ್ಮ ಪುತ್ತೂರು, ಬಂಟ್ವಾಳಗಳಲ್ಲಿ ಅದನ್ನು ನಿರೀಕ್ಷಿಸಬಹುದೇ? ಯಾಕೆ ರೈಲ್ವೆ ನಿಲ್ದಾಣಕ್ಕೆ ಜನರು ಬರುತ್ತಿಲ್ಲ ಎಂದು ಯಾರಾದರೂ (ಹೋರಾಟಗಾರರು ಅಲ್ಲದ ಜನಸಾಮಾನ್ಯರು) ಚಿಂತಿಸಿದ್ದಾರೆಯೇ? ರಾಜಕಾರಣಿಗಳು ಎಷ್ಟು ಬಾರಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ? ಜನರಿಗೆ ಇದು ಉಪಯೋಗವಾಗುತ್ತದೆಯೋ ಇಲ್ಲವೋ ಎಂದು ಎಷ್ಟು ಬಾರಿ ಚಿಂತಿಸುತ್ತಾರೆ? ತಮ್ಮ ಹಿಂಬಾಲಕರನ್ನು ಬೆಂಗಳೂರಿಗೆ ಸಮಾವೇಶವೋ ಇನ್ನಿತರ ಕಾರ್ಯಕ್ರಮಗಳಿಗೋ ಕರೆದುಕೊಂಡು ಹೋಗಬೇಕಾದರೆ ಕೆಲವೆಡೆ ರೈಲು ಟಿಕೆಟ್ ಬುಕ್ ಮಾಡುವ ಪದ್ಧತಿ ಉಂಟು. ಆದರೆ ಇಲ್ಲಿನ ರಾಜಕಾರಣಿಗಳಿಗೆ ರೈಲು ಉಂಟೋ, ಇಲ್ಲವೋ ಎಂಬುದೇ ಗೊತ್ತಿಲ್ಲ ಎಂಬುದು ಕ್ಲೀಷೆ ಅಲ್ಲ.
ಹಾಗಾದರೆ ನಮಗೆ ರೈಲು ಬೇಡವೇ? ಬೇಕು. ಇಂದಿಗೂ ಮಂಗಳೂರು, ಬಿ.ಸಿ.ರೋಡಿನಿಂದ ಬೆಂಗಳೂರಿಗೆ ಹೋಗುವ ರೈಲುಗಳೆಲ್ಲವೂ ಹೌಸ್ ಫುಲ್ ಎಂಬಂತೆ ಪ್ರಯಾಣಿಸುತ್ತವೆ. ಜನರು ಬರುವುದಿಲ್ಲ ಎನ್ನುತ್ತೀರಿ, ಹೌಸ್ ಫುಲ್ ಎನ್ನುತ್ತೀರಿ ಯಾಕೆ ಎಂದು ಕೇಳಿದಿರಾ? ಇವೆಲ್ಲವೂ ಬಸ್ ಗೆ ಪರ್ಯಾಯವಾಗಿ ಹೋಗುವವರು. ಬಸ್ ನಲ್ಲಿ ಹೋಗಲು ಅಸಾಧ್ಯವಾದವರು ಹಾಗೂ ಕಡಿಮೆ ಖರ್ಚಿನಲ್ಲಿ ಪುರುಸೊತ್ತಿನಲ್ಲಿ ಹೋಗಲು ಇಚ್ಛಿಸುವವರು ಎಂಬುದನ್ನು ಗುರುತು ಮಾಡಿಕೊಳ್ಳಬೇಕು.
ಉಳಿದ ಕಡೆ ಹಾಗಲ್ಲ. ಅರ್ಜೆಂಟ್ ಬೆಂಗಳೂರಿಗೆ ಹೋಗಬೇಕು ಎಂದರೂ ರೈಲನ್ನು ಬಳಸುವವರಿದ್ದಾರೆ. ಕೇರಳೀಯರಂತೆ ರೈಲು awareness ಹೊಂದಿದವರು ಇಲ್ಲಿ ಇಲ್ಲ. ಇಂದಿಗೂ ಮಂಗಳೂರು – ಪುತ್ತೂರು, ಮಂಗಳೂರು – ಉಡುಪಿ ಲೋಕಲ್ ಪ್ಯಾಸೆಂಜರ್ ಗಳಿಲ್ಲ. ಹೀಗಾಗಿಯೇ ದ.ಕ. ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ.
ಇಂಥದ್ದನ್ನೆಲ್ಲ ನಿವಾರಿಸಲು ಶಕ್ತವಾದರೆ ನಮ್ಮ ಸ್ಥಳಿಯರಿಗೆ ಪುತ್ತೂರು – ಮಂಗಳೂರು ಪ್ಯಾಸೆಂಜರ್ ರೈಲುಗಳು ಹತ್ತಿರವಾಗಬಹುದು.
ಕಣ್ಣೂರು-ಬೆಂಗಳೂರು, ಅಥವಾ ಕಾರವಾರ – ಬೆಂಗಳೂರು ರೈಲಿನ DISADVANTAGE ಏನೆಂದರೆ, ಕಣ್ಣೂರು ಅಥವಾ ಕಾರವಾರದಿಂದ ರೈಲು ಬರುವಾಗ ತಡವಾದರೆ ಮಂಗಳೂರಿನ ಪ್ಯಾಸೆಂಜರ್ ಗಳೂ ತೊಂದರೆ ಅನುಭವಿಸಬೇಕು. ಕಾರವಾರ ಅಥವಾ ಕಣ್ಣೂರಿನಿಂದ ಬರುವವರಿಗೆ ಮಂಗಳೂರಿನವರು ಮೊದಲ ಆದ್ಯತೆ ಕೊಡಬೇಕು. ಇದರ ಜೊತೆಗೆ ಮಂಗಳೂರಿನಿಂದಲೇ ಬೆಂಗಳೂರಿಗೆ ಹೊರಡುವ ರೈಲು ಬೆಂಗಳೂರಿಗೆ ಅವೇಳೆಯಲ್ಲಿ ತಲುಪದೆ ಪ್ರಯಾಣಿಕರಿಗೆ ಅಗತ್ಯವಾದ ಹೊತ್ತಿನಲ್ಲಿ ತಲುಪುವಂತಾದರೆ, ಮಂಗಳೂ ಸೀಟು ಹೆಚ್ಚಳವಾಗುತ್ತದೆ, ಮಂಗಳೂರು ಮೊದಲ ಸ್ಟಾಪ್ ಆಗುವ ಬದಲು ಕೇವಲ ಹತ್ತು ನಿಮಿಷಕ್ಕೆ ಹತ್ತಲು ಇರುವುದು ಎಂದಾದರೆ, ಜಿಲ್ಲಾ ಕೇಂದ್ರ, ದೊಡ್ಡ ನಗರ, ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಯಾತಕ್ಕೆ? ಮಂಗಳೂರಿಂದಲೇ ಹೊರಡುವ ರೈಲು ಇದ್ದರೆ, ಮಂಗಳೂರು, ಬಂಟ್ವಾಳ, ಪುತ್ತೂರಿನ ಪ್ರಯಾಣಿಕರಿಗೆ ಹೆಚ್ಚು ಸೀಟುಗಳು ದೊರಕುತ್ತವೆ. ಕಡಿಮೆ ದರದಲ್ಲಿ ಸುಖವಾಗಿ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯ.
Be the first to comment on "ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?"