ದ.ಕ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಅಡಿಕೆ ಬೆಳೆ ನಾಶವಾಗಿರುವ ಕುರಿತು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಧನ ನೀಡುವಂತೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮೂಲಕ ಒತ್ತಾಯ ಮಾಡಲಾಗಿದೆ. ನಷ್ಟದ ಬಗ್ಗೆ ಸೂಕ್ತ ಪರಿಹಾರ ನೀಡಲಾಗುವುದೆಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆ ಕೃಷಿಯು ಕೊಳೆ ರೋಗ ಪೀಡಿತವಾಗಿದೆ. ಇದರಿಂದ ಅಡಿಕೆ ಬೆಳೆಯು ಹಂತ ಹಂತವಾಗಿ ನಾಶವಾಗಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ, ಹೆಚ್ಚಿನ ಪರಿಹಾರಕ್ಕಾಗಿ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಅವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದರು.
ಅಡಿಕೆ ಬೆಳೆ ನಾಶವಾಗಿರುವ ಕುರಿತು ತೋಟಗಾರಿಕಾ ಇಲಾಖೆಯಿಂದ ಸಮೀಕ್ಷೆ ಮಾಡಲು ರಾಜ್ಯ ಸರಕಾರವು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಎರಡು ತಂಡವನ್ನು ರಚನೆ ಮಾಡಿದೆ. ಸರ್ವೇ ಮಾಡಲು ಸೆ. 10 ಕೊನೆಯ ದಿನವಾಗಿದ್ದು, ಇದರ ಅವಧಿಯನ್ನು ವಿಸ್ತರಣೆ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಪ್ರಕೃತಿ ವಿಕೋಪದ ವಿಶೇಷ ಅನುದಾನದಡಿ ಹೆಕ್ಟೇರುವಿಗೆ 18 ಸಾವಿರ ರೂ.ಪರಿಹಾರ ಧನ ನೀಡಲು ಅವಕಾಶವಿದೆ. ಆದರೆ, ಅಧಿಕಾರಿಗಳು ತಾಂತ್ರಿಕ ಸರ್ವೇ ಮಾಡಿ ಮಳೆಹಾನಿ ಅಥವಾ ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಕೇವಲ ೫೦೦ ರೂ. ಪರಿಹಾರ ನೀಡುತ್ತಿರುವುದು ರೈತರಿಗೆಮಾಡುವ ಅವಮಾನ ಎಂದರು.
ಪ್ರತಿಭಟನೆಗೆ ಬೆಂಬಲ: ಅಡಿಕೆ ಕೊಳೆರೋಗದಿಂದ ಕಂಗಾಲಾದ ತಾಲೂಕಿನ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕಿನ ಅಡಿಕೆ ಬೆಳೆಗಾರರ ಒಕ್ಕೂಟ ಹಾಗೂ ರೈತ ಸಂಘ, ಹಸಿರು ಸೇನೆ ಇವರ ಸಂಯುಕ್ತಾಶ್ರಯದಲ್ಲಿ ಸೆ.4ರಂದು ಬಿ.ಸಿ.ರೋಡು ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯುವ ಪ್ರತಿಭಟನೆ ತನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕರು ತಿಳಿಸಿದರು.
Be the first to comment on "ಬೆಳೆ ನಾಶವಾದರೆ ಪ್ರಕೃತಿ ವಿಕೋಪದಡಿ ಪರಿಹಾರ: ಸಿಎಂ ಸ್ಪಂದನೆ – ಶಾಸಕ ರಾಜೇಶ್ ನಾಯ್ಕ್"