ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ೪೦ ಶಾಲೆಗಳು ತುಳು ಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಳು ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಆಯ್ದುಕೊಂಡಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ತುಳು ಭಾಷಾ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಇಂದು ಎಲ್ಲೆಡೆ ತುಳು ಭಾಷೆ, ಸಂಸ್ಕ್ರತಿಯತ್ತ ಜನರು ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಶಿಕ್ಷಣ ಸಮನ್ವಯಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ರಾಜೇಶ್ ಜಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೆ ಮಕ್ಕಳಿಗೆ ತುಳು ಭಾಷೆ, ಸಂಸ್ಕ್ರತಿಯನ್ನು ಕಲಿಸಿದರೆ ಮುಂದಿನ ದಿನಗಳಲ್ಲಿ ತುಳು ವ್ಯಾಪಕವಾಗಿ ಬೆಳೆಯುತ್ತದೆ ಎಂದರು.
ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳು ಭಾಷೆ, ನಾಡು, ಸಂಸ್ಕ್ರತಿಯ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ತುಳು ಭಾಷೆ ಪ್ರಾಚೀನವಾದುದು, ಸಂಪದ್ಭರಿತವಾದುದು ಮತ್ತು ಪ್ರಬುದ್ಧವಾದುದು.ಈ ಭಾಷೆಯ ಇತಿಹಾಸವನ್ನು ಅರಿತಾಗ ತನ್ನಿಂತಾನೆ ಪ್ರೀತಿ ಹುಟ್ಟುತ್ತದೆ. ಸಮೃದ್ಧವಾಗಿರುವ ತುಳು ಬೆಳೆಯುವ ಎಲ್ಲಾ ಅರ್ಹತೆ ಇದೆ ಎಂದರು. ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದ.ಕ ಮತ್ತು ಉಡುಪಿ ಜಿಲ್ಲೆಗಳಿಂದ ಶಿಕ್ಷಕರು ಕಾರ್ಯಾಗಾರಕ್ಕೆ ಆಗಮಿಸಿದ್ದರು.
Be the first to comment on "2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ತುಳು ಕಲಿಕೆ: ಎ.ಸಿ.ಭಂಡಾರಿ"