www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನ ಅಮ್ಟಾಡಿ ಹಾಗೂ ಇರ್ವತ್ತೂರು ಗ್ರಾ.ಪಂಗಳಲ್ಲಿ ತೆರವಾಗಿದ್ದ ತಲಾ ಒಂದೊಂದು ಸ್ಥಾನಗಳಿಗೆ ಗುರುವಾರ ನಡೆದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆದಿದ್ದು, ಇರ್ವತ್ತೂರು ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಸುಧೀಂದ್ರ ಶೆಟ್ಟಿ ಮತ್ತು ಅಮ್ಟಾಡಿ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಸುರೇಂದ್ರ ಪೂಜಾರಿ ಚುನಾಯಿತರಾಗಿದ್ದಾರೆ.
ಎರಡೂ ಸ್ಥಾನಗಳ ಮತ ಎಣಿಕೆ ಜೂ. 17ರಂದು ಭಾನುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌದದಲ್ಲಿ ನಡೆಯಿತು.ತಹಶೀಲ್ದಾರ್ ವೈ.ರವಿ ನಿರ್ದೇಶನದಲ್ಲಿ ಸಿಬ್ಬಂದಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಅಮ್ಟಾಡಿ ಪಂಚಾಯಿತಿ ಸದಸ್ಯೆ ಚಂದ್ರಾವತಿ ಬಿ. ಭಂಡಾರಿ ಅವರ ನಿಧನದಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಬಂಟ್ವಾಳದ ಎಸ್‌ವಿಎಸ್ ಟೆಂಪಲ್ ಶಾಲೆಯಲ್ಲಿ ಉಪಚುನಾವಣೆ ನಡೆದಿತ್ತು. ಪಂಚಾಯಿತಿಯ ಸಿಪಿಐ ಬೆಂಬಲಿತ ಸದಸ್ಯೆಯಾಗಿದ್ದ ಚಂದ್ರಾವತಿಯವರು ಕಳೆದ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಂದ್ರ ಪೂಜಾರಿ 332 ಮತಗಳನ್ನು ಪಡೆದರು. ಹಾಗೂ ಸಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಮೃತ ಚಂದ್ರಾವತಿಯವರ ಪತಿ ಬಾಬು ಭಂಡಾರಿ 315 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಬೆಂಬಲಿತ ಸುರೇಂದ್ರ ಪೂಜಾರಿ ವಿಜಯಿಯಾದರು.
ಇರ್ವತ್ತೂರು ಗ್ರಾಮ ಪಂಚಾಯತ್‌ನ ಮೂಡುಪಡುಕೋಡಿ 1ನೇ ಕ್ಷೇತ್ರದ ತೆರವಾದ ಒಂದು ಸ್ಥಾನಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಧೀಂದ್ರ ಶೆಟ್ಟಿ 391 ಮತ ಗಳಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜನಾರ್ದನ ಶೆಟ್ಟಿ 302 ಮತ ಪಡೆದಿದ್ದಾರೆ. ಹಿಂದಿನ ಸದಸ್ಯ ಸುಂದರ ಶೆಟ್ಟಿಯವರು ಪಂಚಾಯಿತಿಯ ಸಾಮಾನ್ಯ ಸಭೆಗೆ ನಿರಂತರವಾಗಿ ಗೈರು ಹಾಜರಾದ ಹಿನ್ನಲೆಯಲ್ಲಿ ಅವರ ಸದಸ್ಯತ್ವ ರದ್ದಾಗಿತ್ತು.
Be the first to comment on "ಗ್ರಾಪಂ ಉಪಚುನಾವಣೆ: ಒಂದು ಕಾಂಗ್ರೆಸ್ ಮತ್ತೊಂದು ಬಿಜೆಪಿ ಬೆಂಬಲಿತರಿಗೆ ಜಯ"