ಪಂಜೆ ಮಂಗೇಶರಾಯರ ಜನ್ಮಸ್ಥಳ ಪ್ರದೇಶವಾದ ಬಂಟ್ವಾಳ ಪುರಸಭೆಯ ಕಚೇರಿ ಎದುರು ಇರುವ ಸರಕಾರಿ ಆಸ್ಪತ್ರೆ ಪಕ್ಕದ ಮರದ ನೆರಳಿನಲ್ಲಿ ಸಾಹಿತ್ಯಾಸಕ್ತರು ಒಟ್ಟು ಸೇರಿ ಪುಸ್ತಕ ಅನಾವರಣ ಕಾರ್ಯಕ್ರಮವನ್ನು ನಡೆಸಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂರ್ಯ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಸಹನಾ ಸಾಹಿತಿ ಭಾಸ್ಕರ ಅಡ್ವಳ ಬರೆದ ನಮ್ಮೆಲ್ಲರ ಪ್ರಕಾಶಕ್ಕಾಗಿ ಎಂಬ ಸ್ವಂತಿಕೆ ವಿಕಸನದ ಚಿಂತನೆಗಳ ಪುಸ್ತಕವನ್ನು ಬಿಡುಗಡೆಗೊಳಿಸಿದಳು.
ಪಂಜೆ ಮಂಗೇಶರಾಯರ ಬದುಕಿನ ಕುರಿತು ತನಗಿದ್ದ ಮಾಹಿತಿಯನ್ನು ಸಭೆಗೆ ತಿಳಿಸಿದ ಸಹನಾ, ಅವರ ರಚನೆಗಳನ್ನು ಹಾಗೂ ತಾನು ರಚಿಸಿದ ಚುಟುಕುಗಳನ್ನು ಹಾಡುವ ಮೂಲಕ ಸೇರಿದ ಸಾಹಿತ್ಯಾಸಕ್ತರ ಗಮನ ಸೆಳೆದಳು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ವಿ.ಬಿ.ಕುಳಮರ್ವ ಮಾತನಾಡಿ, ಕೃತಿ ಮತ್ತು ಅಡ್ವಳ ಅವರ ಕುರಿತು ಬೆಳಕು ಚೆಲ್ಲಿದರು. ಪ:ಂಜೆಯವರ ಸಾಹಿತ್ಯದ ಕುರಿತು ವಿಶ್ಲೇಷಣೆ ನಡೆಸಿದರು. ಅಧ್ಯಕ್ಷತೆ ವಹಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಪಂಜೆಯವರ ಜನ್ಮಸ್ಥಳದಲ್ಲಿ ನಡೆದ ಈ ಕಾರ್ಯಕ್ರಮ ಅಪೂರ್ವ ಹಾಗು ಅರ್ಥಪೂರ್ಣ, ಮಕ್ಕಳನ್ನು ತೊಡಗಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿ.ಆರ್.ಸಿ.ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ ನುಡಿಗೀತೆ ಹಾಡಿದರು. ಮಕ್ಕಳ ಲೋಕದ ಕಾರ್ಯದರ್ಶಿ ರಾಜಾರಾಮ ವರ್ಮ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮೋಹನ ರಾವ್ ವಂದಿಸಿದರು. ಭಾಸ್ಕರ ಅಡ್ವಳ ಪ್ರಾಸ್ತಾವಿಕ ಮಾತನಾಡಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಪಂಜೆ ಜನ್ಮಸ್ಥಳದಲ್ಲಿ ಸಾಹಿತ್ಯ ಕಾರ್ಯಕ್ರಮ"