ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ ಯೋಜನೆಗಳನ್ನು ಬದಲಾಯಿಸಿ ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಮತ್ತಷ್ಟು ಸಂಕುಚಿತಗೊಳಿಸಿತೇ ವಿನ: ಯಾವುದೇ ಸ್ಪಷ್ಟತೆಯನ್ನು ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. 2,80,000 ಕೋಟಿ ರೂಪಾಯಿ ಸಾಲವನ್ನಷ್ಟೇ ಸಿದ್ಧರಾಮಯ್ಯ ಎಲ್ಲರ ಮೇಲೆ ಹೊರಿಸಿದ್ದಾರೆ ಎಂದು ಕಾರ್ಕಳ ಶಾಸಕ, ಬಿಜೆಪಿ ಮುಖಂಡ ವಿ.ಸುನಿಲ್ ಕುಮಾರ್ ಹೇಳಿದರು.
ಕಲ್ಲಡ್ಕದಲ್ಲಿ ಸೋಮವಾರ ರಾತ್ರಿ ನಡೆದ ಬಿಜೆಪಿ ಬಂಟ್ವಾಳ ವತಿಯಿಂದ ನಡೆಯುತ್ತಿರುವ ಪರಿವರ್ತನೆಗೆ ನಮ್ಮ ನಡಿಗೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ವರ್ಷಕ್ಕೆ 30 ಕಿ.ಮೀ. ಅಭಿವೃದ್ಧಿಯನ್ನು ಬಿಜೆಪಿ ನೇತೃತ್ವದ ಸರಕಾರ ಇದ್ದಾಗ ಮಾಡಿದ್ದರೆ, ಈ ಸರಕಾರ 20 ಕಿ.ಮೀಯನ್ನಷ್ಟೇ ಮಾಡುತ್ತಿದೆ. ರೇಷನ್ ಕಾರ್ಡ್ ಸಮಸ್ಯೆ ಇವತ್ತಿನವರೆಗೂ ಬಗೆಹರೀಲಿಲ್ಲ. ಸ್ಪಷ್ಟವಾದ ಮರಳು ನೀತಿ ಜಾರಿಯಾಗಿಲ್ಲ. ಲೋಕಾಯುಕ್ತ ದುರ್ಬಲಗೊಂಡಿದೆ. ಭ್ರಷ್ಟಾಚಾರ ಇಲಾಖೆ, ಇಲಾಖೆಯಲ್ಲಿವೆ, ಈ ಸರಕಾರದಲ್ಲಿ ನೀತಿ ಇಲ್ಲ, ಸ್ಪಷ್ಟತೆ ಇಲ್ಲ, ಯಾವ ಯೋಜನೆಗಳನ್ನು ಜಾರಿಗೆ ಕೊಡಬೇಕು ಎಂಬ ಆಲೋಚನೆ ಮಾಡಿಲ್ಲ, ಕಾನೂನು ಸುವ್ಯವಸ್ಥೆ ಚೆನ್ನಾಗಿಲ್ಲ, ಸರ್ಕಾರಿ ನೌಕರರೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುನೀಲ್ ಕುಮಾರ್ ಹೇಳಿದರು.
2014ರಲ್ಲಿ ಅಧಿವೇಶನದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಯಾವತ್ತು ಬಗೆಹರಿಸ್ತೀರಿ ಎಂದು ಕೇಳಿದಾಗ ಅರಣ್ಯ ಸಚಿವ ರೈ ಒಂದು ವರ್ಷದಲ್ಲಿ ಬಗೆಹರಿಸುವ ಮಾತನಾಡಿದ್ದರು. ನಾಲ್ಕು ವರ್ಷವಾದರೂ ಸಮಸ್ಯೆ ಹಾಗೇ ಇದೆ. ಅದರ ಪರಿಣಾಮ ಬಡಜನರಿಗೆ ಹಕ್ಕುಪತ್ರ ಕೊಡಲಾಗಲಿಲ್ಲ. ನಾಲ್ಕು ವರ್ಷಗಳಿಂದ ಅರಣ್ಯ ಸಚಿವರು ಏನು ಮಾಡುತ್ತಿದ್ದಾರೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಆರು ತಿಂಗಳಲ್ಲಿ ಮೂರು ಎಸ್ಪಿ ಬಂದರು. ಯಾವತ್ತೂ ಇಂಥ ಪರಿಸ್ಥಿತಿ ನಿರ್ಮಾಣ ಆಗಿಲ್ಲ. ಕಲ್ಲಡ್ಕ , ಪುಣಚಕ್ಕೆ ಹಣಕಾಸು ನೆರವು ರದ್ದುಗೊಳಿಸುವಂತೆ ಸಚಿವ ರೈ ಅವರೇ ಪತ್ರ ಬರೆದಿದ್ದಾರೆ ಎಂದರು.
ಡಾ. ಪ್ರಸಾದ್ ಭಂಡಾರಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪಕ್ಷ ಪ್ರಮುಖರಾದ ಜಿ.ಆನಂದ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಜಯಲಕ್ಷ್ಮೀ ಭಟ್, ರಾಜೇಶ್ ಕೊಟ್ಟಾರಿ, ವಿದ್ಯಾಧರ ರೈ, ಲೋಕಾನಂದ ಏಳ್ತಿಮಾರ್, ಜಯರಾಮ ರೈ, ತನಿಯಪ್ಪ ಗೌಡ, ದಿನೇಶ ಭಂಡಾರಿ, ಆನಂದ ಶಂಭೂರು, ವಿಠಲ ನಾಯ್ಕ, ಧೀರಜ್ ಬಲ್ಲೆಕೋಡಿ, ಜಗನ್ನಾಥ ಕುಲಾಲ್, ರಮೇಶ್ ಕುದ್ರೆಬೆಟ್ಟು, ಸೀಮಾ ಮಾಧವ, ವಜ್ರನಾಥ ಕಲ್ಲಡ್ಕ, ಮಹಾಬಲ ಆಳ್ವ ಉಪಸ್ಥಿತರಿದ್ದರು.
Be the first to comment on "ಸರ್ಕಾರದ ಯಾವ ಯೋಜನೆಗಳಲ್ಲೂ ಸ್ಪಷ್ಟತೆ ಇಲ್ಲ: ಸುನೀಲ್ ಕುಮಾರ್"