ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮ ಪಂಚಾಯಿತಿನ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಅಬ್ಬಾಸ್ ಕೆಲಿಂಜ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕಳೆದ ಬಾರಿ ಅಧ್ಯಕ್ಷರಾಗಿ ಪ್ರೇಮಲತಾ ಹಾಗೂ ಉಪಾಧ್ಯಕ್ಷರಾಗಿ ನಿಶಾಂತ್ ಅವರು ಆಯ್ಕೆಗೊಂಡಿದ್ದರು. ಪಕ್ಷದ ಸೂಚನೆಯಂತೆ ಉಪಾಧ್ಯಕ್ಷರಾಗಿದ್ದ ನಿಶಾಂತ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ಸಲ್ಲಿಸಿದ್ದರು.
ಇದೀಗ ಗ್ರಾಮ ಪಂಚಾಯಿತಿನಲ್ಲಿ ನಡೆದ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಬ್ಬಾಸ್ ಕೆಲಿಂಜ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ, ಉಪತಹಶೀಲ್ದಾರ ಕೆ ಗೋಪಾಲ, ಚುನಾವಣಾ ಅಧಿಕಾರಿ ವಿನಯ್ ನಾಗರಾಜ್ ಅವರು ಚುನಾವಣೆ ನಡೆಸಿಕೊಟ್ಟರು.
ನೂತನ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಬ್ಬಾಸ್ ಕೆಲಿಂಜ ಅವರನ್ನು ಅಭಿನಂದಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಮುಖ್ಯವಲ್ಲ. ತೀರ್ಮಾನವೇ ಮುಖ್ಯ ಎಂಬಂತೆ ನಿಶಾಂತ್ ಅವರು ಅಧಿಕಾರ ತ್ಯಾಗ ಮಾಡಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುಳಾ ಮಾಧವ ಮಾವೆ ಮಾತನಾಡಿ ಯುವಕರು ಇಂದು ಪಕ್ಷಕ್ಕಾಗಿ ಶ್ರಮಿಸುವ ಮೂಲಕ ಎಲ್ಲರೂ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಸದಸ್ಯರು ನಿರಂತರ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ನಿಕಟಪೂರ್ವ ಉಪಾಧ್ಯಕ್ಷ ನಿಶಾಂತ್, ಬಂಟ್ವಾಳ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಬೋಳಂತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್ ರೈ, ಮೂಡ ಅಧ್ಯಕ್ಷ ಸದಾಶಿವ ಬಂಗೇರ, ಅಭಿವೃದ್ಧಿ ಅಧಿಕಾರಿ ಗಿರಿಜಾ, ಗ್ರಾಮ ಕರಣಿಕ ಕರಿಬಸಪ್ಪ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ವೀರಕಂಭ ಗ್ರಾಪಂ ಉಪಾಧ್ಯಕ್ಷರಾಗಿ ಅಬ್ಬಾಸ್ ಕೆಲಿಂಜ ಆಯ್ಕೆ"