ಶ್ರೀ 108 ಸನ್ಮತಿ ಸಾಗರ ಮಹಾರಾಜರ ಶಿಷ್ಯರಾದ, ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿದ್ದು, ಆ ಪ್ರಯುಕ್ತ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಸೋಂದಾ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸಿದ್ಧ ಪರಮೇಷ್ಠಿ ಸ್ಪಟಿಕ ಬಿಂಬ ಅಭಿಷೇಕವನ್ನು ಧರಣೇಂದ್ರ ಇಂದ್ರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.
ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಮತ್ತು ಪೂಜ್ಯ ಭಟ್ಟಾರಕರು ಶ್ರೀ ಸಿದ್ಧ ಪರಮೇಷ್ಠಿ ಸ್ಫಟಿಕ ಬಿಂಬದ ಅಭಿಷೇಕವನ್ನು, ಪೂಜಾ ವಿಧಿ- ವಿಧಾನಗಳನ್ನು ವಿವರವಾಗಿ ತಿಳಿಯಪಡಿಸಿ ಅಭಿಷೇಕ ಆರಾಧನೆಯನ್ನು ಸಂಪನ್ನಗೊಳಿಸಿದರು.
ಅಪರಾಹ್ನ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು. ಧರ್ಮ ಸಭೆಯಲ್ಲಿ ಶ್ರೀ ಕ್ಷೇತ್ರ ಸೋಂದಾ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳವರು ಮಾತನಾಡುತ್ತಾ ಗುರುಗಳ ಭಕ್ತಿಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರೆ ಮುಕ್ತಿ ಪಡೆದು ಸಿದ್ಧಾತ್ಮನಾಗಲು ಸಾಧ್ಯ. ಅತ್ಯಂತ ಉತ್ತಮ ಚರ್ಯೆ ಹೊಂದಿರುವ ಗುರುಗಳ ಸೇವೆ ದುರ್ಲಭವಾದ ಈ ಕಾಲದಲ್ಲಿ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಸಾನ್ನಿಧ್ಯ ದೊರಕಿರುವುದು ಪಾಣೆಮಂಗಳೂರು ಶ್ರಾವಕರ ಪುಣ್ಯ ಎಂದರು.
ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀಗಳು ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳವರಿಗೆ ನೂತನ ಪಿಂಛಿಯನ್ನು ನೀಡಿ ಆಶೀರ್ವದಿಸಿದರು.
ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ಜೀವನದಲ್ಲಿ ಯಾವಾಗಲೂ ಗುರುವಾಗಿ ಬಾಳುವುದಕ್ಕಿಂತ ಶಿಷ್ಯನಾಗಿ ಇರುವುದು ಉತ್ತಮ ಎಂದರು.
ಅಭಿಷೇಕ ಮತ್ತು ಧರ್ಮ ಸಭೆಯಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಳಗಾವಿ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್, ಬ್ರಿಜೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಶ್ರೀ ಸಿದ್ಧಪರಮೇಷ್ಠಿ ಸ್ಫಟಿಕ ಬಿಂಬಾಭಿಷೇಕ, ಮಂಗಲ ಪ್ರವಚನ"