ಮಂಗಳೂರು ಹವ್ಯಕ ಸಭಾ ವತಿಯಿಂದ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಯೋಗರತ್ನ ಗೋಪಾಲಕೃಷ್ಣ ಭಟ್ ದೇಲಂಪಾಡಿ ಅವರಿಂದ ಪ್ರಾತ್ಯಕ್ಷಿತೆ ಸಹಿತ ಯೋಗ ಮುದ್ರಾ ಹಾಗೂ ವರ್ಣ ಚಿಕಿತ್ಸೆ ಕಾರ್ಯಕ್ರಮ ಜರಗಿತು. ದೇಲಂಪಾಡಿಯವರು ಲಘು ಮಂತ್ರ ಸಹಿತ ಯೋಗ ಮುದ್ರೆಗಳನ್ನು ಹಾಕುವ ಮೂಲಕ ಬೇರೆ ಬೇರೆ ರೀತಿಯ ರೋಗಗಳನ್ನು ನಿವಾರಿಸಬಹುದು ಎಂಬುದನ್ನು ಮಾಡಿ ತೋರಿಸಿದರು.
ಮಾನವ ದೇಹವು ಅಗ್ನಿ, ವಾಯು, ಆಕಾಶ, ಜಲ ಹಾಗೂ ಪೃಥ್ವಿ ಎಂಬ ಪಂಚ ಭೂತಗಳಿಂದ ಆಗಿದ್ದು ಅವುಗಳನ್ನು ನಮ್ಮ ಬೆರಳುಗಳಲ್ಲಿರುವ ಬೇರೆ ಬೇರೆ ಭಾಗಗಳಿಂದ ಉದ್ದೀಪನಗೊಳಿಸಿ ತತ್ಸಂಬಂಧವಾದ ಬಾಧೆಗಳಿಂದ ಮುಕ್ತಿ ಸಾಧ್ಯ ಎಂಬುದನ್ನು ಮನತಟ್ಟುವಂತೆ ವಿವರಿಸಿದರು.ನಂತರ ದೇಹದಲ್ಲಿರುವ ಚಕ್ರಗಳಲ್ಲಿ ಬೇರೆ ಬೇರೆ ವರ್ಣಗಳಿದ್ದು ಅವುಗಳ ಬಣ್ಣದ ಮೇಲೆ ಏಕಾಗ್ರತೆಯಿಂದ ಧ್ಯಾನಿಸಿದರೆ ದೇಹದಲ್ಲಿ ಶಕ್ತಿಯನ್ನು ಉದ್ದೀಪನಗೊಳಿಸಬಹುದು ಎಂದು ಚಿತ್ರ ಸಹಿತ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಶ್ಯಾಮಪ್ರಸಾದ ಮುದ್ರಜೆ, ದಯಾನಂದ ಹಾಗೂ ಶ್ರೀಮತಿ ಪ್ರಿಯ ಅವರು ಸಹಕರಿಸಿದರು. ತದನಂತರ ಅಧ್ಯಾಪಕರ ದಿನಾಚರಣೆಯ ಭಾಗವಾಗಿ ದೇಲಂಪಾಡಿ ದಂಪತಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿವಚನವಾಡಿದ ದೇಲಂಪಾಡಿಯವರು ತನ್ನ ಸಮಾಜ ಬಾಂಧವರಿಂದ ಸನ್ಮಾನಿಸಿಕೊಂಡದ್ದು ತುಂಬಾ ಸಂತೋಷದ ವಿಷಯ ಎಂದು ಹೇಳಿ ಮುಂದೆ ತಾನು ಅರ್ಧದಿನದ ಯೋಗ ಮುದ್ರಾ ಶಿಬಿರವನ್ನೇ ಇಲ್ಲಿ ಸಾರ್ವಜನಿಕವಾಗಿ ಮಾಡುತ್ತೇನೆ ಎಂದು ಘೋಷಿಸಿದರು. ಸಭೆಯ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣ ನೀರಮೂಲೆಯವರು ದೇಲಂಪಾಡಿಯವರ ಅಗಾಧ ಜ್ಞಾನ ಹಾಗೂ ಯೋಗದ ಬಗ್ಗೆ ಅವರಿಗಿರುವ ಬದ್ಧತೆಗಳನ್ನು ಪ್ರಶಂಸಿಸಿದರು ಹಾಗೂ ಮುದ್ರಾ ಯೋಗ ಶಿಬಿರವನ್ನು ಅಕ್ಟೋಬರ್ 22 ರಂದು ಸಾಯಂಕಾಲ 3ರಿಂದ 6 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರವಾಗಿ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಪುಷ್ಪ ಕೇಕಣಾಜೆ ಅವರನ್ನು ಗೌರವಿಸಲಾಯಿತು. ಹವ್ಯಕ ಸಭಾದ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹವ್ಯಕ ಸಭಾ ವಿವಾಹ ವೇದಿಕೆ ಸಂಚಾಲಕಿ ಶ್ರೀಮತಿ ಲಕ್ಷ್ಮಿ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಸಭಾದ ಉಪಾಧ್ಯಕ್ಷ ಬಾಲಸುಬ್ರಮಣ್ಯ ಕಬೆಕ್ಕೋಡು ವಂದಿಸಿದರು. ಚಿ. ಶ್ಯಮಂತಕೃಷ್ಣ ಪ್ರಾರ್ಥನೆ ಮಾಡಿದರು.
Be the first to comment on "ದೇಲಂಪಾಡಿಯವರಿಂದ ಯೋಗ ಮುದ್ರಾ, ವರ್ಣ ಚಿಕೆತ್ಸೆ"